ಕಲಬುರಗಿ: ರಂಗಾಯಣದಿಂದ ನಗರದ ಐವಾನ್ ಇ ಶಾಹಿ ಪ್ರದೇಶದಲ್ಲಿರುವ ಎಚ್‌ಕೆಇ ಸಂಸ್ಥೆ ಬಾಲಕಿಯರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಿರಿಯ ರಂಗಕರ್ಮಿ ರಾಯಚೂರಿನ ತಾಯಣ್ಣ ಯರಗೇರಾ ಅವರೊಂದಿಗೆ ಫೆ.೧೩ರಂದು ಬೆಳಗ್ಗೆ ೧೧ಕ್ಕೆ ರಂಗದಂಗಳದಲ್ಲಿ ಮಾತುಕತೆ ಸಂವಾದ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ತಿಳಿಸಿದರು.
ವಿದ್ಯಾರ್ಥಿಗಳು, ಯುವ ಸಮೂಹದಲ್ಲಿ ರಂಗ ಕಲೆಯ ಜಾಗೃತಿ, ವರ್ಗಾವಣೆ, ಪರಿಚಯಿಸುವ ಉದ್ದೇಶದಿಂದ ಕಾಲೇಜು ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ರಂಗಕರ್ಮಿಗಳು ತಮ್ಮ ರಂಗ ಪಯಣದ ಬುತ್ತಿ ಬಿಚ್ಚಿಡಲಿದ್ದಾರೆ. ಪ್ರಾಚಾರ್ಯೆ ಉಷಾದೇವಿ ಸಿ.ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಲಿಂಗಪ್ಪ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಂದಿನ ದಿನದಲ್ಲಿ ರಂಗಾಯಣದಿಂದ ಏಳು ಜಿಲ್ಲೆಗಳಲ್ಲಿ ರಂಗ ಗೀತೆ, ಕಲಿಕಾ ಶಿಬಿರದಂತಹ ಕ್ರಿಯಾತ್ಮಕ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತದೆ. ಪ್ರದೇಶದ ದೊಡ್ಡಾಟ, ಸಣ್ಣಾಟ ಕಲೆಗಳ ಪರಿಚಯಿಸಲು ಅಕಾಡೆಮಿಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು. ರಂಗಾಯಣದ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಇದ್ದರು.