ಧಾರವಾಡ: ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ರಂಗಸಂಗೀತ, ರಂಗಸಾಹಿತ್ಯ, ರಂಗಭೂಮಿ ನಟನೆ, ರಂಗಭೂಮಿಯಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಕೆ. ಜಗುಚಂದ್ರ ಹೆಸರಿನಲ್ಲಿ ನೀಡುವ ರಂಗಚಂದ್ರ ಪ್ರಶಸ್ತಿಗೆ 2023ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಭಾಗವತ ಬೀರಣ್ಣ ಮಾಸ್ತರ ಅಡಿಗೋಣ ಆಯ್ಕೆ ಆಗಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ತಿಳಿಸಿದ್ದಾರೆ.
ಮಕ್ಕಳ ರಂಗಭೂಮಿ ಮತ್ತು ರಂಗಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ರಂಗನಿರ್ದೇಶಕ ಕೆ.ಜಗಚಂದ್ರ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಯಕ್ಷಗಾನ ಕಲಾವಿದ, ಶಿಕ್ಷಕ, ಎರಡು ದಶಕಗಳ ಕಾಲ ಯಕ್ಷಗಾನದ ಕಲೆ ಉಳಿಸಿ ಯುವ ಕಲಾವಿದರಿಗೆ ಯಕ್ಷಗಾನದ ಗುರುಗಳಾಗಿ ಸಾಧನೆ ಮಾಡಿದ ಭಾಗವತ ಬೀರಣ್ಣ ಮಾಸ್ತರ ಆಡಿಗೋಣ ಅವರಿಗೆ ನೀಡಲಾಗುತ್ತಿದೆ.
ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್. ಫರಾಸ್, ಗೌರವಾಧ್ಯಕ್ಷ ಕೆ.ಎಚ್. ನಾಯಕ, ರಂಗ ಕಲಾವಿದ ವಿಜಯ ದೊಡಮನಿ, ರಂಗ ನಿರ್ದೇಶಕ ಮಲ್ಲಪ್ಪ ಹೊಂಗಲ, ಸಂಗೀತಗಾರ ಶಿವಾನಂದ ಹೂಗಾರ ಅವರ ತಂಡ ಬೀರಣ್ಣ ಅವರನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.