ಚಿತ್ರದುರ್ಗ: ರಂಗ ಕಲೆಗೆ ಜಾತಿ, ಮತ, ಪಂಥದ ಸೋಂಕಿಲ್ಲ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಆಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಎರಡು ದಿನಗಳ ‘ಬಾದರದಿನ್ನಿ ರಂಗೋತ್ಸವ’ ರಂಗ ಸಂಗೀತ ನಾಟಕಗಳ ಪ್ರದರ್ಶನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರಂಗಭೂಮಿ ಕಲಾವಿದ, ಚಿತ್ರನಟ ಅಶೋಕ್ ಬಾದರದಿನ್ನಿ ಅವರಲ್ಲಿ ನಿಖರವಾದ ವಿಚಾರಧಾರೆ ಇತ್ತು. ಅವರ ನಾಟಕಗಳು ಇಂದಿಗೂ ಪ್ರಖ್ಯಾತಿ ಪಡೆದಿವೆ. ರಂಗಭೂಮಿಯಲ್ಲಿ ಅಪಾರ ಶಿಷ್ಯವೃಂದವನ್ನು ಬೆಳಸಿ ಅವರು ಕಣ್ಮರೆಯಾಗಿದ್ದಾರೆ. ಕಲಾವಿದರನ್ನು ಪ್ರೋತ್ಸಾಹಿಸಿದಾಗ ಮಾತ್ರ ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ನಡೆಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ನೂರಾರು ನಾಟಕ ರೂಪಕಗಳನ್ನು ನಿರ್ದೇಶಿಸಿರುವ ಅಶೋಕ್ ಬಾದರದಿನ್ನಿ ಅವರಿಗೂ ದುರ್ಗದ ಮಣ್ಣಿಗೆ ಅನೇಕ ವರ್ಷಗಳ ನಂಟಿದೆ. ಅವರು ತಮ್ಮ ನಾಟಕಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಬೇರೂರಿದ್ದಾರೆ ಎಂದು ಹೇಳಿದರು.
ಉತ್ಸವ ಉದ್ಘಾಟಿಸಿದ ನಟಿ ಸಿತಾರಾ ಮಾತನಾಡಿ, ಬಾದರದಿನ್ನಿ ಅವರು ಇಂದಿಗೂ ರಂಗಭೂಮಿಯಲ್ಲಿ ಮನೆ ಮಾತಾಗಿ ಉಳಿದಿದ್ದಾರೆ ಎಂದರು.
ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ನಿವೃತ್ತ ಪ್ರಾಚಾರ್ಯ ರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ರಂಗಕರ್ಮಿ ಕೆಪಿಎಂ ಗಣೇಶಯ್ಯ, ಎ.ಜಿ.ಬಸವರಾಜಪ್ಪ ಮತ್ತಿತರರು ಇದ್ದರು. ಬಾದರಿದಿನ್ನಿ ಅಕಾಡೆಮಿ ಕಲಾವಿದರು ‘ಒಂದು ಸಾವಿನ ಸುತ್ತ’ ನಾಟಕ ಪ್ರದರ್ಶಿಸಿದರು.