ನೆಲಮಂಗಲ: ಪ್ರತಿಯೊಬ್ಬರೂ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಸಹಕಾರ ನೀಡಿದರೆ ಮಾತ್ರ ಮಾದರಿ ರಂಗಮಂದಿರ ನಿರ್ಮಾಣ ಸಾಧ್ಯ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರಸಭೆಯ ಕೆಂಪಲಿಂಗನಹಳ್ಳಿಯ ನ್ಯೂ ಗಾರ್ಡನ್ ಸಿಟಿ ಬಡಾವಣೆಯಲ್ಲಿ ಬುಧವಾರ ತಾಲೂಕು ರಂಗಭೂಮಿ ಕಲಾವಿದರ ಸಂಘದಿಂದ ಆಯೋಜಿಸಿದ್ದ ನೂತನ ರಂಗ ಮಂದಿರ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಾದ್ಯಂತ ಸಾವಿರಾರು ಮಂದಿ ಕಲಾವಿದರಿದ್ದು, ಕಲೆ ಪ್ರದರ್ಶನಕ್ಕೆ ಒಂದು ಮಂದಿರ ಇಲ್ಲ ಎಂಬ ಬೇಸರ ಪ್ರತಿಯೊಬ್ಬ ಕಲಾವಿದರಲ್ಲಿತ್ತು. ಬಹುದಿನದ ಬೇಡಿಕೆಯಾಗಿದ್ದ ರಂಗ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿರುವುದು ಸಂತಸದ ಸಂಗತಿ ಎಂದರು.
ಹಿರಿಯರ ಮಾರ್ಗದರ್ಶನದಲ್ಲಿ ಕಲೆಯನ್ನು ಅಭ್ಯಾಸ ಮಾಡಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವುದು ಕಲಾವಿದರ ಕರ್ತವ್ಯ. ಕಲೆಗೆ ಪ್ರೋತ್ಸಾಹ ನೀಡುವ ಕಲಾಭಿಮಾನಿಗಳು ಹೆಚ್ಚಿನ ಸಹಕಾರ ನೀಡುವ ಮೂಲಕ ರಂಗ ಮಂದಿರ ನಿರ್ಮಾಣಕ್ಕೆ ಸಾಕ್ಷಿಯಾಗಬೇಕು ಎಂದರು.
ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಹಲವು ವರ್ಷಗಳಿಂದ ತಾಲೂಕಿನ ರಂಗಭೂಮಿ ಕಲಾವಿರದರು ರಂಗ ಮಂದಿರ ನಿರ್ಮಾಣ ಕನಸು ಹೊಂದಿದ್ದರು. ಶಾಸಕರ ವಿಶೇಷ ಅನುದಾನದಲ್ಲಿ ಸಹಕಾರ ನೀಡಲಾಗುವುದು. ಗ್ರಾಮೀಣ ಭಾಗದಲ್ಲಿ ಹುಟ್ಟಿಕೊಂಡ ರಂಗ ಕಲೆ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಈ ಕಲೆಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ರಂಗ ಮಂದಿರ ನಿರ್ಮಾಣಕ್ಕೆ ಸುಮಾರು 2.50 ಕೋಟಿ ಹಣ ಬೇಕಾಗಬಹುದು. ಈಗಾಗಲೇ ಸರ್ಕಾರದಿಂದ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ರಂಗ ಮಂದಿರ ನಿರ್ಮಾಣಕ್ಕೆ ಸುಮಾರ 50 ಲಕ್ಷ ಅನುದಾನವನ್ನು ಮಂಜೂರು ಮಾಡಿಸಿಕೊಡಬೇಕು. ಜತೆಗೆ ರಂಗ ಮಂದಿರ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ತಾಲೂಕು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆ.ವಿ.ರುದ್ರಪ್ಪ ಶಾಸಕರಿಗೆ ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ನಗರಸಭೆ ಅಧ್ಯಕ್ಷ ಲತಾ ಹೇಮಂತ್‌ಕುಮಾರ್, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಪ್ರಕಾಶ್, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ತಾಲೂಕು ಕಲಾವಿದರ ಬಳಗ ಅಧ್ಯಕ್ಷ ಡಾ.ಜಿ.ರಂಗರಾಜು, ನಿವೃತ್ತ ಪಿಡಿಒ ಮುನಿರಾಮೇಗೌಡ, ಪ್ಯಾರಾಗಾನ್ ಕಂಪನಿ ಮಾನವಸಂಪನ್ಮೂಲ ಅಧಿಕಾರಿ ರಂಗಸ್ವಾಮಿ, ಕಣೇಗೌಡನಹಳ್ಳಿ ಗ್ರಾಪಂ ಅಧ್ಯಕ್ಷ ರಾಜಣ್ಣ, ಮುಖಂಡರಾದ ಭವಾನಿಶಂಕರ್ ಬೈರೇಗೌಡ, ರಂಗಸ್ವಾಮಿ, ರಂಗನಾಥ್, ವಿಷ್ಣು, ತಾಲೂಕು ರಂಗಭೂಮಿ ಕಲಾವಿದರ ಸಂಘದ ಉಪಾಧ್ಯಕ್ಷ ಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ಆರ್.ಗಂಗರಾಜು, ಖಜಾಂಚಿ ನರಸಿಂಹಮೂರ್ತಿ, ಸಹಕಾರ್ಯದರ್ಶಿ ಜಯರಾಮಯ್ಯ, ಸಂಘಟನಾ ಕಾರ್ಯದರ್ಶಿ ಜಪಪ್ರಕಾಶ್, ಕಲಾವಿದರಾದ ಸಿದ್ದರಾಜು, ಜ್ಯೋರ್ತಿಲಿಂಗಪ್ಪ, ಗರುಡಾಚಾರ್ಯ, ಸಂಪತ್, ಸಿದ್ದಮ್ಮ ಮತ್ತಿತರರು ಉಪಸ್ಥಿತರಿದ್ದರು.