ಕಲಬುರಗಿ: ಸೇಡಂನ ನೃಪತುಂಗ ಹವ್ಯಾಸಿ ಕಲಾವಿದರ ನಾಟ್ಯ ಸಂಘದ ವಾರ್ಷಿಕೋತ್ಸವ ನಿಮಿತ್ತ ೨೫ ಜನರಿಗೆ ರಂಗ ನೃಪತುಂಗ ಪ್ರಶಸ್ತಿ ಹಾಗೂ ರೈತನಿಗೆ ಅಭಿನಂದನಾ ಸಮಾರಂಭ ಅ.೨೨ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಿಂಗಣ್ಣ ಅಲ್ದಿ ಹೇಳಿದರು.
ಸೇಡಂ ಪಟ್ಟಣದ ಕರ್ನಾಟಕ ಸುವರ್ಣ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿ ಪ್ರದಾನ ಜತೆಗೆ ಉಚಿತ ನಾಟಕ ಪ್ರದರ್ಶನ ನೆರವೇರಲಿದೆ. ಎಲ್ಲರಿಗೂ ವೃಕ್ಷ ನೀಡುವ `ವೃಕ್ಷಾರೋಪಣಾ' ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಾ ಪೋಷಕರಾದ ರಮೇಶ ತಿಪ್ಪನೂರ, ರಂಗ ಕಲಾವಿದರಾದ ರಮೇಶ ಕೋರಿಶೆಟ್ಟಿ, ನಾಗರಾಜ ನಂದೂರ, ಶಿವರಾಜ ಬಿರಬಿಟ್ಟೆ, ಅರ್ಜುನ ಜಮಾದಾರ ಸೇರಿ ಜಿಲ್ಲೆಯ ೨೫ ಕಲಾ ಸಾಧಕರನ್ನು ಗುರುತಿಸಿ ರಂಗ ನೃಪತುಂಗ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.
ಐವರು ಪ್ರಶಸ್ತಿ ಪುರಸ್ಕೃತರಿಗೆ ಪತ್ರಿಕಾ ಭವನದಲ್ಲಿ ಆಯ್ಕೆಯ ಪತ್ರ ಹಾಗೂ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಂಘದ ಮಾರ್ಗದರ್ಶಕ ಸಿದ್ದಪ್ಪ ತಳ್ಳಳ್ಳಿ ನೀಡಿದರು. ಸಂಘದ ಶಂಕರ ಗುಗ್ಗರಿ, ಧರ್ಮಣ್ಣ ಹಂಗನಳ್ಳಿ, ರಾಜು ಮಂಗಲಗಿ ಇದ್ದರು.