ಜಿಲ್ಲೆ

ರಂಗ ಕಲೆಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಜಬಾಬ್ದಾರಿ

ಮದ್ದೂರು: ನಶಿಸುತ್ತಿರುವ ರಂಗಕಲೆಯನ್ನು ಉಳಿಸುವಲ್ಲಿ ಹಿರಿಯ ಕಲಾವಿದರು ಅವಿರತವಾಗಿ ಶ್ರಮಿಸುತ್ತಿರುವುದು ಮೆಚ್ಚುಗೆ ಸಂಗತಿ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ತೈಲೂರ ಆನಂದಚಾರಿ ಪ್ರಶಂಸೆ ವ್ಯಕ್ತಪಡಿಸಿದರು.

ಪಟ್ಟಣದ ಶಿವಪುರದ ಮದ್ದೂರು ತಾಲೂಕು ಹಿರಿಯ ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಹಿರಿಯ ರಂಗಭೂಮಿ ಕಲಾವಿದರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿಯ ಯುವ ಜನಾಂಗ ರಂಗಕಲೆಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಹಾಗೂ ಸಮಾಜ ಜಾಲತಾಣಗಳಲ್ಲಿ ತೊಡಗಿರುವುದು ಬೇಸರದ ಸಂಗತಿಯಾಗಿದೆ. ರಂಗಕಲೆಯು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಇಂತಹ ರಂಗ ಕಲೆಯನ್ನು ಉಳಿಸಿ,ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದರು.

ರಂಗಭೂಮಿ ಮನರಂಜನೆಯೊಂದಿಗೆ ಜ್ಞಾನವನ್ನು ನೀಡುತ್ತದೆ. ವಿಶೇಷವಾಗಿ ಮಕ್ಕಳಿಗೆ ಪ್ರಾಚೀನ ಕಥೆಗಳು, ಸಂಸ್ಕೃತಿಕ ಮತ್ತು ನಾಗರಿಕತೆಗಳ ಬಗ್ಗೆ ಕಲಿಯಲು ಸಹಾಯ ಮಾಡುತ್ತದೆ. ರಂಗಭೂಮಿ ಯುವ ಪ್ರತಿಭೆಗಳನ್ನು ಪ್ರೇರೇಪಿಸುತ್ತದೆ ಮತ್ತು ಕಲೆಯಲ್ಲಿ ವೃತ್ತಿ ಜೀವವನ್ನು ಮುಂದುವರೆಸಲು ಪ್ರೋತ್ಸಾಹಿಸುತ್ತದೆ. ರಂಗಭೂಮಿ ಪ್ರದರ್ಶಗಳಲ್ಲಿ ಭಾಗವಹಿಸುವ ವ್ಯಕ್ತಿಗಳ ಆತ್ಮವಿಶ್ವಾಸ, ಸಂವಹನ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಲೂಕು ಹಿರಿಯ ರಂಗಭೂಮಿ ಕಲಾವಿದರ ಸಂಘವು ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳನ್ನು ಹಮ್ಮಿಕೊಂಡು ಹಲವಾರು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ರೂಪಿಸುವ ಜತೆಗೆ ಅವರು ರಂಗಭೂಮಿಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಾಡುತ್ತಿರುವುದು ಪ್ರಶಂಸನೀಯ ಸಂಗತಿ ಎಂದರು.

ಮದ್ದೂರು ತಾಲೂಕು ಹಿರಿಯ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹದೇವು ಮಾತನಾಡಿ, ತಾಲೂಕು ರಂಗಭೂಮಿ ಹಿರಿಯ ಕಲಾವಿದರ ಸಂಘವು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಹಮ್ಮಿಕೊಂಡು ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಾ ಬರುತ್ತಿದೆ. ಇದರಿಂದ ಬಹಳಷ್ಟು ಕಲಾವಿದರು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿರುವುದು ಮೆಚ್ಚುಗೆ ವಿಷಯ ಎಂದರು.

ಕಾರ್ಯಕ್ರಮದಲ್ಲಿ ರಂಗಭೂಮಿ ಹಿರಿಯ ಕಲಾವಿದರಾದ ಮಹದೇವು, ಕೆ.ನಾಗರಾಜು, ಬಿ.ಎಂ.ಸತ್ಯ ಹಾಗೂ ವಿ.ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.

ಮದ್ದೂರು ತಾಲೂಕು ಹಿರಿಯ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹದೇವು, ಕಲಾ ಪೋಷಕರಾದ ಎಂ.ಜಿ.ಶ್ರೀಕಂಠಯ್ಯ, ಕಲಾವಿದರಾದ ಕೃಷ್ಣೇಗೌಡ, ಎಂ.ಪಿ.ಮೃತ್ಯುಂಜಯ, ಪಟೇಲ್ ಶಿವಶಂಕರ್, ಹುಣಸೇಮರದದೊಡ್ಡಿ ಸ್ವಾಮಿ, ಗಣೇಶ್, ಕೊತ್ತತ್ತಿ ರಘು, ಬಸವಚಾರಿ, ಚಂದ್ರಮೋಹನ್, ಸೋಮಾಚಾರಿ ಸೇರಿದಂತೆ ಇತರರಿದ್ದರು.