ಗೋಣಿಕೊಪ್ಪ: ಯೌವ್ವನದಲ್ಲಿ ಮನಸ್ಸಿನ ಹತೋಟಿ ಆರೋಗ್ಯಕಾರಿ ಎಂದು ವಿರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಸಲಹೆ ನೀಡಿದರು.
ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು ಹಲವು ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು ಆತಂಕಕಾರಿ. ಹದಿಹರೆಯದ ವಯಸ್ಸಿನಲ್ಲಿ ಮನಸ್ಸಿನ ಹಿಡಿತ ಮುಖ್ಯ. ಎಚ್‌ಐವಿ, ಏಡ್ಸ್ ಕಾಯಿಲೆಗಳಿಗೆ ಬಲಿಯಾಗದಂತೆ ಎಚ್ಚರವಹಿಸಬೇಕಿದೆ. ಅಸುರಕ್ಷಿತ ಲೈಂಗಿಕ ಸಂಪರ್ಕ, ಮಾದಕ ವ್ಯಸನ, ಅಸುರಕ್ಷಿತ ರಕ್ತ ವರ್ಗಾವಣೆಯಿಂದ ರೋಗ ಹರಡಲು ಕಾರಣವಾಗಿದೆ. ಹಾಗಾಗಿ ಮನಸ್ಸಿನ ಹತೋಟಿ ಮುಖ್ಯ ಎಂದರು.
ಪ್ರಾಂಶುಪಾಲ ಡಾ.ಮಾಳೇಟಿರ ಬಿ.ಕಾವೇರಿಯಪ್ಪ ಮಾತನಾಡಿ, ನಮ್ಮ ನಡೆಯಲ್ಲಿನ ತಪ್ಪು ಸರಿಯನ್ನು ಅವಲೋಕಿಸಿ ಜೀವನ ಸಾಗಿಸಬೇಕಿದೆ. ಯೋಗ, ಧ್ಯಾನ ಮತ್ತು ಶಿಕ್ಷಣದ ಮೂಲಕ ಉತ್ತಮ ಜೀವನ ಕಂಡುಕೊಳ್ಳಬಹುದು ಎಂದರು.ಎನ್‌ಎಸ್‌ಎಸ್ ಅಧಿಕಾರಿ ಎಂ.ಎನ್.ವನಿತ್‌ಕುಮಾರ್ ವಿದ್ಯಾರ್ಥಿಗಳಿಗೆ ಎಚ್‌ಐವಿ, ಏಡ್ಸ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ನೀಡಿದರು.
ಚನ್ನನಾಯಕ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎನ್‌ಎಸ್‌ಎಸ್ ನಾಯಕರಾದ ಶಿವಕುಮಾರ್, ಲಕ್ಷ, ದರ್ಶನ, ಮೋಕ್ಷ, ಮಿಥುನ್, ರೋಷನ್ ಇದ್ದರು.