ಜಿಲ್ಲೆ

ಯೋಧರಿಗೆ ಒಳಿತಾಗಲೆಂದು ಮಾದಪ್ಪನಿಗೆ ವಿಶೇಷ ಪೂಜೆ

ಹನೂರು: ಭಾರತೀಯ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ’ ಯಶಸ್ವಿಯಾದ ಹಿನ್ನೆಲೆಯಲ್ಲಿ ಗುರುವಾರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಯೋಧರಿಗೆ ಒಳಿತಾಗಲೆಂದು ಸಂಕಲ್ಪ ಮಾಡಿ ವಿಶೇಷ ಪೂಜೆ ಮಾಡಲಾಯಿತು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಭಾರತ ಸೇನಾ ಪಡೆ ಭಯೋತ್ಪಾದಕ ಶಿಬಿರಗಳ ಮೇಲೆ ಅಪರೇಷನ್ ಸಿಂಧೂರ ಹೆಸರಿನಲ್ಲಿ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿತ್ತು. ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲ ದೇಗುಲಗಳಲ್ಲಿ ಭಾರತೀಯ ಸೇನೆ ಹೆಸರಿನಲ್ಲಿ ಯೋಧರಿಗೆ ಒಳಿತಾಗಲಿ ಹಾಗೂ ಸೇನೆಗೆ ಮತ್ತಷ್ಟು ಶಕ್ತಿಯ ಅನುಗ್ರಹವನ್ನು ಭಗವಂತನು ಕರುಣಿಸಲಿ ಎಂಬ ಸಂಕಲ್ಪದೊಂದಿಗೆ ವಿಶೇಷ ಪೂಜೆಯನ್ನು ನೆರವೇರಿಸುವಂತೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ಮ.ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ದೇಗುಲದ ಆಗಮಿಕ ವೀರಪ್ಪಸ್ವಾಮಿ ಹಾಗೂ ಬೇಡಗಂಪಣ ಅರ್ಚಕರಿಂದ ಭಾರತೀಯ ಭೂಸೇನೆ, ನೌಕಾ ಸೇನೆ ಹಾಗೂ ವಾಯು ಸೇನೆಯ ಯೋಧರಿಗೆ ಒಳಿತಾಗಲೆಂದು ಹಾಗೂ ಮಾದಪ್ಪ ಅನುಗ್ರಹ ಕರುಣಿಸಲೆಂದು ಸಂಕಲ್ಪ ಮಾಡಿ ಶತನಾಮಾವಳಿಯೊಂದಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.