ಜಿಲ್ಲೆ

ಯೋಜನೆಯ ಮಾಹಿತಿಯೊಂದಿಗೆ ಸಬೆಗೆ ಹಾಜರಾಗಿ

ಬಾಗಲಕೋಟೆ: ಪ್ರತಿಯೊಂದು ಸಭೆಯಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.


ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜೂನ್-2024ರ ಮಾಹೆಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಯೊಂದು ಯೋಜನೆಗಳಿಗೆ ಬಿಡುಗಡೆಯಾದ ಅನುದಾನ, ಖರ್ಚು ಮತ್ತು ಬಾಕಿ ಉಳಿದ ಅನುದಾನ ಎಷ್ಟು ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಈ ಬಗ್ಗೆ ಮುಂಚಿತವಾಗಿಯೇ ಇಲಾಖೆಯಲ್ಲಿ ಸಭೆ ಮಾಡಿಕೊಂಡು ತಯಾರಿಯಲ್ಲಿ ಬರುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಅವರಿಗೆ ಸೂಚಿಸಿದರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದ ಅವರು ಅನುದಾನ ಬಂದಾಗ ಅದನ್ನು ಸಂಪೂರ್ಣವಾಗಿ ವಿನಿಯೋಗವಾಗಬೇಕು. ಪ್ರಗತಿಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು. ನಿಮಗೆ ನೀಡಿರುವ ಗುರಿಗೆ ಅನುಗುಣವಾಗಿ ಕೆಲಸ ಆಗಬೇಕು ಎಂದರು. ಅನುಮತಿ ಪಡೆಯದೇ ಸಭೆಗೆ ಅನಧಿಕೃತವಾಗಿ ಗೈರು ಹಾಜರಾದ ಶಿಕ್ಷಣ, ಸಹಾಕಾರ ಇಲಾಖೆ, ಪ್ರವಾಸೋದ್ಯಮ, ಮೀನುಗಾರಿಕೆ, ಆರೋಗ್ಯ ಹಾಗೂ ಕೈಗಾರಿಕೆ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಸಮಗ್ರ ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಈ ಯೋಜನೆಯಿಂದ ಲಾಭಪಡೆದುಕೊಂಡವರ ಬಳಿ ಇತರೆ ರೈತರನ್ನು ಕರೆದುಕೊಂಡು ಹೋಗಿ ಮಾಹಿತಿ ಅವರು ಸಹ ಈ ಯೋಜನೆಯ ಲಾಭ ಪಡೆಯುವಂತಾಗಬೇಕು ಎಂದು ತಿಳಿಸಿದರು.

ವಿಷೇಶ ಘಟಕ ಯೋಜನೆಯಡಿ ನಿಗಧಿಪಡಿಸಿದ ಒಟ್ಟು 119.34 ಕೋಟಿ ರೂ.ಗಳ ಪೈಕಿ ಬಿಡುಗಡೆಯಾದ 32.65 ಕೋಟಿ ರೂ.ಗಳ ಪೈಕಿ 22.77 ಕೋಟಿ ರೂ. ಖರ್ಚು ಮಾಡುವ ಮೂಲಕ ಆರ್ಥಿಕ ಶೇ.69.73, ಭೌತಿಕ ಶೇ.71.72 ರಷ್ಟು ಪ್ರಗತಿ ಸಾಧಿಸಿದರೆ, ಗಿರಿಜನ ಉಪಯೋಜನೆಯಡಿ ನಿಗದಿಪಡಿಸಿದ 21.90 ಕೋಟಿ ರೂ.ಗಳ ಪೈಕಿ 5.60 ಕೋಟಿ ರೂ. ಬಿಡುಗಡೆಯಾಗಿದ್ದು, 2.62 ಕೋಟಿ ರೂ. ಖರ್ಚು ಮಾಡುವ ಮೂಲಕ ಆರ್ಥಿಕ ಶೇ.46 ಮತ್ತು ಭೌತಿಕ ಶೇ.70 ರಷ್ಟು ಪ್ರಗತಿ ಸಾಧಿಸಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಸಭೆಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೃಷಿ ಇಲಾಖೆಯ ಉಪನಿರ್ದೇಶಕ ರೂಢಗಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟೆ, ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಕಡಿವಾಲರ, ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮದ ಜಿಲ್ಲಾ ಅಧಿಕಾರಿ ರಮೇಶ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.