ಜಿಲ್ಲೆ

ಯೋಜನೆಗಳು ಜನರಿಗೆ ತಲುಪದಿದ್ದರೆ ಪ್ರಯೋಜನವೇನು?: ಕೇಂದ್ರ ಸಚಿವ ಎಚ್‌ಡಿಕೆ ಅಸಮಾಧಾನ

ಮೈಸೂರು: ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಕೊಡದ ಬ್ಯಾಂಕ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಇಂತಹ ಯೋಜನೆಗಳು ಜನರಿಗೆ ತಲುಪದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಹಾಗೂ ಸಮನ್ವಯ ಸಮಿತಿ ಸಭೆ(ದಿಶಾ) ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವಕರ್ಮ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿಶೇಷ ಕಾಳಜಿ ವಹಿಸಿದ್ದಾರೆ. ಇಂತಹ ಯೋಜನೆಗಳು ಜನರಿಗೆ ತಲುಪದಿದ್ದರೆ ಏನು ಅನುಕೂಲವಾಗಲ್ಲ. ಆದ್ದರಿಂದ ವಿವಿಧ ಯೋಜನೆಯಡಿ ಸಾಲ ಸೌಲಭ್ಯವನ್ನು ಫಲಾನುಭವಿಗಳಿಗೆ ಬ್ಯಾಂಕ್‌ಗಳು ನೀಡಬೇಕು.

ಈ ವಿಷಯದಲ್ಲಿ ವಿಳಂಬವಾಗಬಾರದು. ಅದಕ್ಕಾಗಿ ಜಿಲ್ಲಾಧಿಕಾರಿ ಅವರು ಬ್ಯಾಂಕ್‌ಗಳ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಬೇಕು ಎಂದು ತಿಳಿಸಿದರು.

ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿರುವ ಯುವಜನರಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಕಲ್ಪಿಸಿ ಸ್ವಯಂ ಉದ್ಯೋಗ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ನಿರ್ದೇಶಿಸಿದರು.

ಯುವ ಜನರು ದಾರಿ ತಪ್ಪುತ್ತಿದ್ದಾರೆ. ಅವರಿಗೆ ಕೆಲಸವೂ ಸಿಗುತ್ತಿಲ್ಲ. ಈಗಿನ ಸ್ಥಿತಿಯಲ್ಲಿ ಎಲ್ಲರಿಗೂ ಉದ್ಯೋಗ ಕಲ್ಪಿಸುವುದು ಕಷ್ಟಕರ. ಈ ಸಮಸ್ಯೆ ಎದುರಿಸುತ್ತಿರುವ ಯುವ ಜನರ ಮನಸ್ಸು ಸಹ ಬೇರೆ ಕಡೆ ಹೋಗುತ್ತಿದೆ. ಇದನ್ನು ತಪ್ಪಿಸಲು ಅವರಿಗೆ ಸ್ವಯಂ ಉದ್ಯೋಗ ಅವಕಾಶ ಒದಗಿಸಬೇಕು. ಅದಕ್ಕಾಗಿ ಕೌಶಲ, ತರಬೇತಿ ನೀಡಿ ಉತ್ತಮ ಜೀವನ ರೂಪಿಸಿಲು ಸಹಕಾರ ನೀಡಬೇಕು. ಅದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಜನರ ಕಲ್ಯಾಣಕ್ಕಾಗಿ ಅನುಷ್ಠಾನಕ್ಕೆ ತಂದಿರುವ ಹಲವಾರು ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅನುದಾನವನ್ನು ಶೇ.100 ರಷ್ಟು ಬಳಕೆ ಆಗುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.

ಕಲುಷಿತ ನೀರು ಸೇವನೆಯಿಂದ ಜನರು ಅಸ್ವಸ್ಥಗೊಂಡ ಅನಾರೋಗ್ಯಕ್ಕೆ ತುತ್ತಾಗಿರುವ ಪ್ರಕರಣಗಳು ವರದಿಯಾಗುತ್ತಿದೆ. ಈ ಕುರಿತು ಅಗತ್ಯ ಕ್ರಮ ವಹಿಸಿ, ಜನರಿಗೂ ಅರಿವು ಮೂಡಿಸಬೇಕು. ಲಕ್ಷ್ಮಣತೀರ್ಥ ನದಿಗೆ ಸೇರುತ್ತಿರುವ ಕೊಳಚೆ ನೀರು ತಡೆಯಲು ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ನಾಗನಹಳ್ಳಿ ಸ್ಯಾಟಲೈಟ್ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಪಡೆಯುವ ಕಾರ್ಯವನ್ನು ಪೂರ್ಣಗೊಳಿಸಬೇಕು. ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯ ಇರುವ ಭೂಮಿ ಒದಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಲ ಜೀವನ್ ಮಿಷನ್ ಯೋಜನೆಯು ಪ್ರತಿ ಮನೆಗೂ ನಲ್ಲಿಯ ಮೂಲಕ ನೀರನ್ನು ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಎಲ್ಲ ಹಳ್ಳಿಗಳಿಗೂ ನೀರು ಒದಗಿಸಬೇಕು.

ಕುಡಿಯುವ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡಬೇಕು. ಅಮೃತ್ ಯೋಜನೆಯಡಿ ನಗರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಅನುದಾನ ಬಿಡುಗಡೆ ಆಗಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ನೀರಿನ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅತಿಯಾದ ಮಳೆಯಿಂದ ಆದ ಬೆಳೆ ಹಾನಿಗೆ ಪರಿಹಾರವನ್ನು ರೈತರಿಗೆ ವಿತರಣೆ ಮಾಡಬೇಕು. ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಲು ರೈತರಿಗೆ ಉತ್ತೇಜನ ನೀಡಬೇಕು. ಇದರಿಂದ ಬೆಳೆ ನಷ್ಟ ಉಂಟಾದರೆ ಬೆಳೆ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಹತ್ತಿ ಬೆಳೆಯ ಕುರಿತು ನಿರಾಸಕ್ತಿ ತೋರಿರುವ ರೈತರಿಗೆ ಅರಿವು ಮೂಡಿಸಬೇಕು. ಜತೆಗೆ, ಹತ್ತಿ ಬೆಳೆಗೆ ಉತ್ತಮ ತಳಿಯ ಬಿತ್ತನೆ ಬೀಜ ಬಂದಿದ್ದು, ರಾಯಚೂರು ಭಾಗದಲ್ಲಿ ಬಿತ್ತನೆ ಆಗುತ್ತಿದೆ. ಇದರಿಂದ ಶೇ.50ರಷ್ಟು ಉತ್ಪಾದನೆ ಹೆಚ್ಚಾಗಿ ರೈತರಿಗೂ ಲಾಭದಾಯಕವಾಗಿದೆ. ಈ ಬಗ್ಗೆ ಅಧ್ಯಯನ ಮಾಡಿ ಎಚ್.ಡಿ.ಕೋಟೆ ಭಾಗದ ಕೃಷಿಕರಿಗೆ ಮಾಹಿತಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ತಿಳಿಸಿದರು.

ಜಾನುವಾರುಗಳಿಗೆ ನಿಗದಿತ ಅವಧಿಯಲ್ಲಿ ಕಾಲುಬಾಯಿ, ಚಪ್ಪೆರೋಗದ ಲಸಿಕೆ ನೀಡಬೇಕು. ಮೇವು ಕಿಟ್‌ಗಳ ವಿತರಣೆ ಮಾಡುವ ಮೂಲಕ ಜಾನುವಾರು ಮೇವು ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದಲ್ಲಿ ಅರಣ್ಯ ಪ್ರದೇಶ ಕಡಿಮೆ ಆಗುತ್ತಿದೆ ಎಂದು ಸರ್ವೆಗಳು ಹೇಳುತ್ತಿವೆ. ಆದರೆ, ಅರಣ್ಯ ಇಲಾಖೆ ವತಿಯಿಂದ ಪ್ರತಿ ವರ್ಷ 1 ಕೋಟಿಯಷ್ಟು ಗಿಡ ನೆಡಲಾಗಿದೆ ಎಂದು ಲೆಕ್ಕ ತೋರಿಸಲಾಗುತ್ತಿದೆ. ಇದು ಹೇಗೆ ಸಾಧ್ಯ? ನೆಡುವ ಗಿಡಗಳ ಪೋಷಣೆ ಆಗಬೇಕು ಎಂದು ತಾಕಿತ್ತು ಮಾಡಿದರು.

ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ವಿವಿಧ ಇಲಾಖೆಗಳಿಂದ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಲೀಡ್ ಬ್ಯಾಂಕ್ ಮ್ಯಾನೇಜರ್ ಈ ನಿಟ್ಟಿನಲ್ಲಿ ಪರಿಶೀಲಿಸಿ ಸಾಲ ನೀಡುವಂತೆ ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಅಗತ್ಯ ಇರುವ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ. ಈಗಾಗಲೇ 150 ಎಕರೆ ಕೆಐಎಡಿಬಿ ವಶಕ್ಕೆ ಪಡೆದಿದ್ದು, ಉಳಿದ 40 ಎಕರೆ ಪಡೆಯಲು ಪ್ರಕ್ರಿಯೆ ಪ್ರಗತಿಯಲ್ಲಿದೆ.

ವಿಮಾನ ನಿಲ್ದಾಣ ಮೇಲ್ದರ್ಜೆಗೆ ಅಡ್ಡಿಯಾಗಿರುವ ಈಗಿರುವ ನಂಜನಗೂಡು ಹೆದ್ದಾರಿಗೆ ಬೈಪಾಸ್ ನಿರ್ಮಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ 500 ಕೋಟಿ ರೂ.ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲು ಒಪ್ಪಿದೆ. ಆದರೆ, ಇದರ ಯೋಜನಾ ವೆಚ್ಚ 800 ಕೋಟಿ ರೂ. ಆಗುವುದಾಗಿ ವರದಿ ನೀಡಿರುತ್ತಾರೆ. ಹೆಚ್ಚುವರಿ ವೆಚ್ಚವನ್ನು ಒಳಗೊಂಡ ಪ್ರಸ್ತಾವನೆ ಒಪ್ಪಿಗೆ ದೊರೆಕಿಸಿಕೊಡಬೇಕಿದೆ ಎಂದು ಎಚ್‌ಡಿಕೆ ಅವರನ್ನು ಕೋರಿದರು.

ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್, ಶಾಸಕರಾದ ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಇದ್ದರು.

ಕಳಪೆ ಕೇಕ್ ಮಾರಿದ ಅಂಗಡಿಗೆ ಬೀಗ

ಹೊಸ ವರ್ಷಾಚರಣೆ ಅಂಗವಾಗಿ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೋಳನಹಳ್ಳಿಯಲ್ಲಿ ಕೇಕ್ ತಿಂದ 32 ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದರು. ಇದಕ್ಕೆ ಕಲುಷಿತ ಆಹಾರವೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳಪೆ ಕೇಕ್ ಮಾರಾಟ ಮಾಡಿದ ಆ ಊರಿನ ಅಂಗಡಿಗೆ ಬೀಗ ಮುದ್ರೆ ಹಾಕಲಾಗಿದೆ. ಅನಾರೋಗ್ಯಗೊಂಡಿದ್ದ ಮಕ್ಕಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಜಿಟಿಡಿ ಗೈರು

ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ದಿಶಾ ಸಭೆಗೆ ಜೆಡಿಎಸ್ ಕೋರ್ ಸಮಿತಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಗೈರಾಗಿದ್ದರು. ಕಳೆದ ಕೆಲ ತಿಂಗಳಿಂದ ಎಚ್‌ಡಿಕೆಯಿಂದ ಮುನಿಸಿಕೊಂಡಿರುವ ಅವರು ಪಕ್ಷ ಚಟುವಟಿಕೆಗಳಿಂದಲೂ ದೂರ ಉಳಿದಿದ್ದಾರೆ. ಜೆಡಿಎಸ್ ನಾಯಕರೊಂದಿಗೆ ಗುರುತಿಸಿಕೊಂಡಿಲ್ಲ. ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಎಚ್‌ಡಿಕೆ ಬಂದರೂ ಜಿಟಿಡಿ ಬಂದಿರಲಿಲ್ಲ. ಆದರೆ, ಅವರ ಪುತ್ರ ಜಿ.ಡಿ.ಹರೀಶ್‌ಗೌಡ ಭಾಗವಹಿಸಿದ್ದರು.