ಹಗರಿಬೊಮ್ಮನಹಳ್ಳಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯದ ಬಡವರ ಬಂಧುವಾಗಿ, ದೀನ-ದಲಿತರ ಆಶಾಕಿರಣವಾಗಿದ್ದು, ಆದರ್ಶ ಹಾಗೂ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಮರಿರಾಮಣ್ಣ ಹೇಳಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಅತ್ಯಂತ ಕ್ರಿಯಶೀಲ ವ್ಯಕ್ತಿಯಾಗಿದ್ದ ಅರಸು ಅವರು ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದರು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ ಮಾತನಾಡಿ, ಸಮಾಜದಲ್ಲಿ ಅನಿಷ್ಟವಾದ ಜೀತ ಹಾಗೂ ಮಲಹೋರುವ ಪದ್ಧತಿಗಳನ್ನು ನಿಷೇಧಿಸಿದ್ದರು. ಹೊಲ ಉಳುವವನೇ ಒಡೆಯ ಎನ್ನುವ ಕಾನೂನು ಜಾರಿಗೆ ತರುವ ಮೂಲಕ ಬಡವರ ಪಾಲಿನ ದಾರಿ ದೀಪವಾಗಿದ್ದರು ಎಂದರು.
ತಹಸೀಲ್ದಾರ್ ಆರ್.ಕವಿತಾ ಅಧ್ಯಕ್ಷತೆ ವಹಿಸಿ, ಡಿ.ದೇವರಾಜ್ ಅರಸು, ಕಾಯಕವೇ ಕೈಲಾಸ ಮಾತಲ್ಲಿ ನಂಬಿಕೆಯನ್ನಿಟ್ಟಿದ್ದರು. ಶಿಕ್ಷಣಕ್ಕೆ ಒತ್ತು ನೀಡಿದ್ದರ ಫಲವಾಗಿ ವಸತಿ ನಿಲಯಗಳನ್ನು ತೆರೆದರು, ಬಡವರಿಗೂ ಶಿಕ್ಷಣ ಕೊಡಿಸುವಲ್ಲ್ಲಿ ಮುಂದಾದರು. ಮೈಸೂರು ಹಾಗೂ ಕರ್ನಾಟಕ ಎನ್ನುವ ಎರಡೂ ಹೆಸರಿನ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು ಎಂದು ತಿಳಿಸಿದರು.
ಬಿಸಿಯೂಟ ಯೋಜನೆ ಅಧಿಕಾರಿ ರಾಜಕುಮಾರ್ ನಾಯ್ಕ ಉಪನ್ಯಾಸ ನೀಡಿ, ಶೋಷಿತರ ಧ್ವನಿಯಾಗಿದ್ದ ಅರಸು ಅವರ ಜೀವನದ ತತ್ವ-ಸಿದ್ಧಾಂತಗಳು ಎಂದಿಗೂ ಪ್ರಸ್ತುತವಾಗಿದ್ದು, ವಸತಿ ನಿಲಯಗಳಲ್ಲಿ ಶಿಕ್ಷಣ ಪಡೆಯುವ ಪ್ರತಿಯೊಬ್ಬರೂ ಅರಸು ಅವರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರಪ್ಪ, ನಾಮನಿರ್ದೇಶಿತ ಸದಸ್ಯ ಬಾಳಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗುರುಬಸವರಾಜ್ ಸೊನ್ನದ್, ಸದಸ್ಯ ಪರಶುರಾಮ, ತಾಪಂ.ಯೋಜನಾಧಿಕಾರಿ ರಮೇಶ ಮಹಾಲಿಂಗಪುರ, ಸಿಡಿಪಿಒ ಬೋರೇಗೌಡ, ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ, ಆನಂದಳ್ಳಿ ಪ್ರಭಾಕರ, ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಉಪ್ಪಾರ ಈಶಪ್ಪ, ಯಾದವ ಸಮಾಜದ ತಾಲೂಕು ಅಧ್ಯಕ್ಷ ಆನೇಕಲ್ಲು ಲಿಂಗರಾಜ್, ಬಿ.ಜಿ.ಹಳ್ಳಿ ಮಹೇಶ ಮತ್ತಿತರರು ಇದ್ದರು.