ತಿಕೋಟಾದ ಕೃಷಿ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಪ್ರಗತಿ ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಬಸಣಪ್ಪ ಕಲಶೆಟ್ಟಿ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ತಾಪಂ ಇಒ ಬಸವರಾಜ ಐನಾಪುರ ಮತ್ತಿತರರಿದ್ದರು. 
ಜಿಲ್ಲೆ

ಯೋಜನೆಗಳ ಅನುಷ್ಟಾನ ಸಮರ್ಪಕವಾಗಲಿ

Vijayapura - Desk - Parashuram Keri

ವಿಜಯಪುರ: ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಸಕಾಲಕ್ಕೆ ತಲುಪಲಿ. ಕಾಮಗಾರಿಗಳು ಸಮರ್ಪಕವಾಗಿ ಪೂರ್ಣಗೊಳ್ಳಲಿ. ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧಿಕಾರಿಗಳಿಗೆ ಸೂಚಿಸಿದರು.

ತಿಕೋಟಾ ಹಾಗೂ ಬಬಲೇಶ್ವರ ತಾಲೂಕಿನ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ತಿಕೋಟದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಪರಿಶೀಲಿಸಿ, ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಕಚೇರಿಯ ಕಾರ್ಯನಿರ್ವಹಣೆ, ವಿವಿಧ ವಿಭಾಗದ ಕಡತಗಳನ್ನು ಪರಿಶೀಲಿಸಿದರು. ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕಚೇರಿಗೆ ಭೇಟಿ ನೀಡಿ, ಕರ ವಸೂಲಿ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.

ತಹಸೀಲ್ದಾರ್ ಕಚೇರಿಯಲ್ಲಿರುವ ಭೂಮಿ ಕೇಂದ್ರ ಹಾಗೂ ಅಟಲ್ ಜಿ ಜನಸ್ನೇಹಿ ಕೇಂದ್ರದ ವಿವರ ಪಡೆದುಕೊಂಡು, ಕೃಷಿಕರಿಗೆ ಸಂಬಂಧಿಸಿದ ಹಾಗೂ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳಂತಹ ಹಲವು ಸೇವೆ ಒದಗಿಸಲಾಗುತ್ತಿದೆ. ಅಧಿಕಾರಿಗಳು ಆದ್ಯಾತಾನುಸಾರ ಪರಿಶೀಲಿಸಿ, ನಿಗದಿತ ಕಾಲಾವಧಿಯೊಳಗೆ ಸಾರ್ವಜನಿಕರು ಕೋರುವ ಅಗತ್ಯ ಪ್ರಮಾಣ ಪತ್ರ ವಿತರಣೆಗೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಡೋಣಿ ನದಿಯಿಂದ ಬಾಧಿತವಾಗುವ ಪ್ರವಾಹಪೀಡಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ತೀವ್ರ ನಿಗಾ ವಹಿಸಲು ಸೂಚನೆ ನೀಡಿದರು. ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಸಾಕಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಬೀಜ ಹಾಗೂ ರಸಗೊಬ್ಬರ ವಿತರಣೆ ರೈತರ ಬೇಡಿಕೆ ಅನುಸಾರ ವಿತರಣೆಗೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ಬಬಲೇಶ್ವರದ ನಿಡೋಣಿ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ, ಗೃಹಲಕ್ಷ್ಮಿ ಯೋಜನೆ ಅರ್ಹರ ನೋಂದಣಿ ಕುರಿತು ವಿವರ ಪಡೆದರು. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ನಂತರ ಬಬಲೇಶ್ವರಕ್ಕೆ ಆಗಮಿಸಿ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿ ಬಳಿಕ ಅಧಿಕಾರಿಗಳ ಸಭೆ ನಡೆಸಿದರು.

ಉಪವಿಭಾಗಾಧಿಕಾರಿ ಬಸಣಪ್ಪ ಕಲಶೆಟ್ಟಿ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ತಾಪಂ ಇಒ ಬಸವರಾಜ ಐನಾಪುರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಎಸ್.ಬಿ. ಪಾಟೀಲ, ಪಪಂ ಆಡಳಿತಾಧಿಕಾರಿ ಎಚ್.ಎ. ಡಲಾಯತ, ಕೃಷಿ ಅಧಿಕಾರಿ ಟಿ.ಎ ಸೋಲಾಪೂರಕರ, ಆರ್.ಎಂ. ಬಿದರಿ ಮತ್ತಿತರರಿದ್ದರು.