ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಸಿದ್ದಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೆ ಮಹಾಂತೇಶ ಕವಟಗಿಮಠ ಚಾಲನೆ ನೀಡಿದರು. ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಚಿಕ್ಕೋಡಿ ಸಂಪಾದನ ಸ್ವಾಮೀಜಿ ಇದ್ದರು. 
ಜಿಲ್ಲೆ

ಯೋಜನೆ ಅನುಷ್ಠಾನಕ್ಕೆ ಸಿಎಂ ಬಳಿ ಶೀಘ್ರ ನಿಯೋಗ

ಚಿಕ್ಕೋಡಿ: ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯನ್ನು ಮುಂಬರುವ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಳಿ ಈ ಭಾಗದ ಮಠಾಧೀಶರು ಹಾಗೂ ರೈತರ ನಿಯೋಗ ಕರೆದುಕೊಂಡು ಹೋಗಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು. ತಾಲೂಕಿನ ಚಿಂಚಣಿ ಸಿದ್ಧ ಸಂಸ್ಥಾನಮಠದಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಜಾರಿ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಚಿಂಚಣಿ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ನೇತೃತ್ವದಲ್ಲಿ ಬೊಮ್ಮಾಯಿ ಅವರನ್ನು ಭೇಟಿಯಾಗಿ, ಚರ್ಚಿಸಲಾಗುವುದು ಎಂದರು.

ಅಂದಾಜು 383 ಕೋಟಿ ರೂ. ಅನುದಾನದಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೂತನ ಯೋಜನೆಯಿಂದ ಒಟ್ಟು 18 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ. ಯೋಜನೆ ಜಾರಿಯಿಂದ ಮಡ್ಡಿ ಭಾಗ ಹಚ್ಚ ಹಸರಿನಿಂದ ಕಂಗೊಳಿಸಲಿದ್ದು, ಅಂರ್ತಜಲ ಮಟ್ಟ ಸಹ ಹೆಚ್ಚಾಗಲಿದೆ. ಯೋಜನೆ ಅನುಷ್ಠಾನ ಮಾಡುವಂತೆ ಒತ್ತಾಯಿಸಿ 2010ರಲ್ಲಿ ಅಂದಿನ ಜಲ ಸಂಪನ್ಮೂಲ ಸಚಿವರಿಗೆ ಪರಿಷತ್‌ನಲ್ಲಿ ಒತ್ತಾಯಿಸಲಾಗಿತ್ತು. ಅವರಿಂದಲೂ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿತ್ತು ಎಂದರು.

ನಾನು ಈಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದಾಗ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಅನುಷ್ಠಾನ ಎಲ್ಲಿಗೆ ಬಂತು ಎಂದು ಪ್ರಶ್ನಿಸಿದ್ದೆ. ಶೀಘ್ರ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ ಎಂದರು.

ಕಳೆದ 20 ವರ್ಷದಿಂದ ಈ ಕುರಿತು ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಎಂ.ಬಿ. ಪಾಟೀಲ, ಡಿ.ಕೆ.ಶಿವಕುಮಾರ, ರಮೇಶ ಜಾರಕಿಹೊಳಿ ಹಾಗೂ ಇಂದಿನ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಈ ಯೋಜನೆ ಜಾರಿಗೆ ಒತ್ತಾಯಿಸಿ ಪತ್ರ ಬರೆದಿರುವ ದಾಖಲೆಗಳ ಬಗ್ಗೆ ಮಹಾಂತೇಶ ಅವರು ಸಭೆಯ ಗಮನಕ್ಕೆ ತಂದರು. ಅಲ್ಲದೆ, ನಾನು ಪ್ರಯತ್ನಿಸಿ ಜಾರಿಗೆ ತಂದ ಯೋಜನೆಗಳನ್ನು ಕೆಲವರು ತಾವೇ ಮಾಡಿರುವ ಬಗ್ಗೆ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು. ಚಿಂಚಣಿ ಅಲ್ಲಮಪ್ರಭು
ಸ್ವಾಮೀಜಿ ಮಾತನಾಡಿ, ಮಹಾಂತೇಶ ಕವಟಗಿಮಠ ಅವರು ರಾಜಕಾರಣದಲ್ಲಿ ಅಧಿಕಾರ ಇಲ್ಲದೆ ಇದ್ದರೂ ರೈತಪರವಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ. ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಜಾರಿಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಚಿಕ್ಕೋಡಿ ಚರಮೂರ್ತಿ ಮಠದ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿದರು.

ಅಭಯ ಪಾಟೀಲ, ಬಸವರಾಜ ಪಾಟೀಲ, ಪ್ರವೀಣ ಮಹಾಜನ, ಅಜಿತ ಕಣಗಲಿ, ಸೋಮು ಸರವಾಡೆ, ಬಾಪು ಪಾಟೀಲ, ಅಣ್ಣಾಸಾಬ ಮಗದುಮ್ಮ, ಹೊನ್ನಗೌಡ ಜಾಣಕಾರೆ, ಅನಿಲ ಪಾಟೀಲ, ಸತೀಶ ಅಪ್ಪಾಜಿಗೊಳ ಹಾಗೂ 18 ಗ್ರಾಮಗಳ ರೈತರು ಇದ್ದರು.