ಜಿಲ್ಲೆ

ಯೋಗಾಭ್ಯಾಸದಿಂದ ಬಂದಿಗಳ ಮಾನಸಿಕ ಸ್ಥಿತಿ ಸುಧಾರಣೆ: ಜಿಲ್ಲಾಧಿಕಾರಿ ಹೇಳಿಕೆ

ಹಾಸನ: ಜಿಲ್ಲಾ ಕಾರಾಗೃಹದಲ್ಲಿರುವ ಬಂದಿಗಳ ಮಾನಸಿಕ ಸ್ಥಿತಿ ಸುಧಾರಣೆಗಾಗಿ ಪ್ರತಿನಿತ್ಯ ಕಡ್ಡಾಯವಾಗಿ ಯೋಗಾಭ್ಯಾಸ, ಧ್ಯಾನ, ಪ್ರಾಣಾಯಾಮ ಮಾಡಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಜಿಲ್ಲಾ ಕಾರಾಗೃಹದ ಅಧೀಕ್ಷಕರಿಗೆ ಸೂಚಿಸಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಸಂಜೆ ನಡೆದ ಜಿಲ್ಲಾ ಕಾರಾಗೃಹದ ಸಂದರ್ಶಕರ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಂದಿಗಳು ಜೈಲಿನಿಂದ ಬಿಡುಗಡೆಗೊಂಡು ಹೊರಹೋದ ನಂತರ ಜೀವನ ರೂಪಿಸಿಕೊಳ್ಳಲು ನೆರವಾಗುವಂತೆ ಕೌಶಲ ತರಬೇತಿಗೆ ಕ್ರಮವಹಿಸಲು ತಿಳಿಸಿದರು.

ಹಾಸನ ಜಿಲ್ಲೆಯ ಶಾಂತಿಗ್ರಾಮದ ಸರ್ವೇ ನಂ.488ರಲ್ಲಿ 40 ಎಕರೆ ಜಮೀನಿನಲ್ಲಿ ನೂತನ ಕೇಂದ್ರ ಕಾರಾಗೃಹ ನಿರ್ಮಾಣದ ಕಾಮಗಾರಿಯ ಕುರಿತು ಚರ್ಚಿಸಿ, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ವತಿಯಿಂದ ಸರ್ಕಾರದ ಹಂತದಲ್ಲಿ ನಿರ್ಮಾಣ ಕಾಮಗಾರಿಯ ಅನುದಾನ ಮಂಜೂರಾತಿಗಾಗಿ ಕ್ರಮ ವಹಿಸಲು ಸೂಚಿಸಿದರು.

ಬಂದಿಗಳ ತುರ್ತು ಅನಾರೋಗ್ಯ ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಕೊಡಿಸುವ ಸಲುವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಒಂದು ಆಂಬ್ಯುಲೆನ್ಸ್ ಒದಗಿಸುವಂತೆ ಹಾಗೂ ವೈದ್ಯರ ಸಲಹೆ ಮೇರೆಗೆ ಔಷಧಗಳನ್ನು ಕಾರಾಗೃಹದಲ್ಲಿ ಪ್ರತಿನಿತ್ಯ ವಿತರಿಸಲು ಒಬ್ಬ ಪುರುಷ ನರ್ಸ್ ಸಿಬ್ಬಂದಿಯನ್ನು ಒದಗಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಗೂ ಮುನ್ನ ಕಾರಾಗೃಹದಲ್ಲಿರುವ ಬಂದಿಗಳನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿ, ಪ್ರತಿನಿತ್ಯ ಯೋಗಾಭ್ಯಾಸ, ದಿನ ಪತ್ರಿಕೆ ಓದುವುದು ಹಾಗೂ ಕಾರಾಗೃಹದಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವಂತೆ ತಿಳಿಸಿದ ಅವರು ನಿಮ್ಮ ಜೀವನದ ಶಿಲ್ಪಿಗಳು ನೀವೇ ಆಗಿರುತ್ತೀರ, ಸನ್ನಡತೆಯಿಂದ ಬಿಡುಗಡೆ ಹೊಂದಿದ ನಂತರ ಬೇರೆಯವರು ಹುಬ್ಬೇರಿಸುವಂತೆ ಉತ್ತಮ ಬದುಕು ಕಟ್ಟಿಕೊಳ್ಳುವಂತೆ ತಿಳಿಸಿದರು.

ಅಡುಗೆ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಂತೆ ತಿಳಿಸಿದರಲ್ಲದೆ, ಅಡುಗೆ ತಯಾರಿಸುವ ಬಂದಿಗಳು ಕೂಡ ಶುಚಿತ್ವ ಕಾಪಾಡಿಕೊಳ್ಳುವಂತೆ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ, ನಗರ ಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಡಿವೈಎಸ್‌ಪಿ ಮುರಳೀಧರ್, ನಾಮ ನಿರ್ದೇಶಿತ ಸದಸ್ಯರಾದ ಬಿ.ಆರ್.ಉದಯಕುಮಾರ್, ಚಂದ್ರಶೇಖರ್, ರೂಪಾ ಹಾಸನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್ ಹಾಗೂ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.