ಸಿಂಧನೂರು: ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಎಂದು ಪ್ರಾಚಾರ್ಯ ವಿಷ್ಣುವರ್ಧನರಡ್ಡಿ ಹೇಳಿದರು.
ನಗರದ ಬಪ್ಪೂರ ರಸ್ತೆ ಮಾರ್ಗದಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ವಸಂತ ಸಂಸ್ಕಾರ ಶಿಬಿರದಲ್ಲಿ ಮಾತನಾಡಿದರು. ಯೋಗ ಮಾಡುವುದರಿಂದಾಗುವ ಪ್ರಯೋಜನ ಹಾಗೂ ಮಕ್ಕಳಿಗೆ ಯೋಗದ ಜತೆಗೆ ಡೊಳ್ಳು ಕುಣಿತ, ಸಂಸ್ಕೃತ ಕಲಿಕೆ, ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಉಪಯೋಗಕಾರಿ ಎಂದರು.
ಸಾನ್ನಿಧ್ಯ ವಹಿಸಿದ್ದ ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್ ಮಾತನಾಡಿ, ಆಶ್ರಮದಿಂದ ಅತ್ಯುಪಯುಕ್ತವಾದ ಕಾರ್ಯಕ್ರಮ ಆಯೋಜಿಸುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಿಂಧನೂರು ಹೆಲ್ತ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಯ್ಯ ಶ್ರೇಷ್ಠಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಬೀರಪ್ಪ ಶಂಭೋಜಿ, ಶಿಕ್ಷಕ ಕಳಕಪ್ಪ ಗಡದ ಇದ್ದರು.