ಹಾಸನ: ಪ್ರತಿದಿನ ಯೋಗಾಭ್ಯಾಸವನ್ನು ಮಾಡುವುದರಿಂದ ಪ್ರತಿಯೊಬ್ಬರ ಜೀವನದಲ್ಲಿ ಶಿಸ್ತು ಒಡಮೂಡುವುದು ಎಂದು ಜಿಲ್ಲಾ ಯೋಗ ಸಂಸ್ಥೆಯ ಅಧ್ಯಕ್ಷ ವಿ.ಕೃಷ್ಣಪ್ಪ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
ನಗರದ ವಿಜಯ ಶಾಲೆಯಲ್ಲಿ ನಡೆದ 11ನೇ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅವಶ್ಯಕವಾದುದು. ವಿಜಯ ಶಾಲೆಯು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೇ ಶಿಕ್ಷಣದಲ್ಲಿ ಯೋಗ ತರಗತಿಗಳನ್ನು ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಶಾಲಾ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ಅವರು ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಮಾತ್ರವಲ್ಲದೆ, ಮನೆಯಲ್ಲೂ ಯೋಗಭ್ಯಾಸವನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಶಾಲೆಯು ಪಠ್ಯದೊಂದಿಗೆ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಸದೃಢ ಬೆಳವಣಿಗೆಗಾಗಿ ಯೋಗ, ಪ್ರಾಣಾಯಾಮ, 6-3-6-3, ಸೂಪರ್ ಬ್ರೈನ್ ಯೋಗವನ್ನು ನಿರಂತರವಾಗಿ ನೆಡೆಸಿಕೊಂಡು ಬಂದಿದೆ. ಇದನ್ನು ವಿದ್ಯಾರ್ಥಿಗಳು ಸದ್ವಿನಿಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿಗಳು ಯೋಗದ ವಿವರಣೆಯೊಂದಿಗೆ ಯೋಗ ಪ್ರದರ್ಶನ ನಡೆಸಿಕೊಟ್ಟರು. ಸಂಪೂರ್ಣ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಿರ್ವಹಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ವೈ.ಎನ್. ಸುಬ್ಬಸ್ವಾಮಿ, ಶಾಲಾ ಶೈಕ್ಷಣಿಕ ಮುಖ್ಯಸ್ಥರಾದ ಡಾ. ಎಸ್. ಶ್ರೀಲಕ್ಷ್ಮೀ, ಪ್ರಾಂಶುಪಾಲ ಕೆ.ಎಸ್.ನಂದೀಶ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.