ಜಿಲ್ಲೆ

ಯೋಗದಿಂದ ಮಾನಸಿಕ-ದೈಹಿಕ ನಿಯಂತ್ರಣ

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಸಂಸ್ಕೃತಿಯಲ್ಲಿ ಯೋಗಕ್ಕೆ ಮಹತ್ವದ ಸ್ಥಾನವಿದೆ. ಇದೀಗ ವಿದೇಶಗಳು ಯೋಗದ ಮಹತ್ವ ಅರಿತು ಯೋಗಾಭ್ಯಾಸ ಮಾಡುತ್ತಿದ್ದಾರೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ನಿಯಂತ್ರಣ ಯೋಗದಿಂದ ಸಾಧ್ಯ ಎನ್ನುವುದು ಸಾಬೀತಾಗಿದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಜನತಾ ಶಿಕ್ಷಣ ಸಮಿತಿ, ಧಾರವಾಡ ಜೈನ ಮಿಲನ ವತಿಯಿಂದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಏರ್ಪಡಿಸಿರುವ ಒಂದು ವಾರದ ಯೋಗ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಆರೋಗ್ಯದ ರಕ್ಷಣೆಗೆ ಜನರು ಪಟ್ಟ ಪಾಡು ನೋಡಿದ್ದೇವೆ. ಪ್ರಾಣಾಯಾಮ, ಕಪಾಲಭಾತಿ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯವಂತರಾಗಿರಲು ಸಹಕರಿಸಿದ್ದನ್ನು ಮರೆಯುವಂತಿಲ್ಲ. ವಿದ್ಯಾರ್ಥಿಗಳಿಗೆ ಮನಸ್ಸಿನ ಏಕಾಗ್ರತೆ ಕಾಪಾಡಲು ಯೋಗ ಪರಿಣಾಮಕಾರಿ ಅಸ್ತ್ರ. ಮನುಷ್ಯ ಒತ್ತಡದ ಬದುಕಿನಲ್ಲಿ ಮನಸ್ಸಿನ ಏಕಾಗ್ರತೆ, ದೈಹಿಕ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ನಿತ್ಯ 1 ಗಂಟೆ ಯೋಗಭ್ಯಾಸ ಮಾಡುವುದರಿಂದ ಉಲ್ಲಾಸದಿಂದ ಕೆಲಸ ಮಾಡಬಹುದು. ಯೋಗ ಅಭ್ಯಾಸ ಮಾಡಿಕೊಂಡಲ್ಲಿ ನಿರೋಗಿಗಳಾಗಲು ಸಾಧ್ಯ ಎಂದರು.
ಯೋಗ ಶಿಕ್ಷಕ ಮಂಜುನಾಥ ಹೂಗಾರ ಮಾತನಾಡಿ, ಯೋಗದಿಂದ ಮಾನಸಿಕ ಅಸಮತೋಲನ ನಿವಾರಿಸುವುದರ ಜತೆಗೆ ರಕ್ತದ ಚಲನೆ ಸರಾಗವಾಗುವುದು. ಯೋಗವನ್ನು ಸರಿಯಾಗಿ ಕಲಿತು ಮಾಡಬೇಕು. ತಪ್ಪಾಗಿ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದಲ್ಲಿ ಏಕಾಗ್ರತೆ ಜತೆಗೆ ದೈಹಿಕ ಕ್ಷಮತೆ ಕಾಪಾಡಿಕೊಳ್ಳಬಹುದು ಎಂದರು.
ಜ್ಯೋತಿ ಕಟಗಿ, ಸಾಧನಾ ಎಸ್., ಸುಜಾತ ಹಡಗಲಿ, ಸಂಗೀತ ಉಪಾಧ್ಯೆ, ಸುನಂದಾ ವರೂರ, ಡಾ. ಜಿನದತ್ತ ಹಡಗಲಿ, ಮಹಾವೀರ ಉಪಾಧ್ಯೆ, ಜೈನ ಮಿಲನ ಮಹಿಳಾ ಸದಸ್ಯರು, ಜೆಎಸ್‌ಎಸ್ ವಿದ್ಯಾರ್ಥಿನಿಯರ ವಸತಿ ಗೃಹದ ವಿದ್ಯಾರ್ಥಿನಿಯರು, ಇತರರು ಇದ್ದರು.