ಬಳ್ಳಾರಿ : ಪ್ರತಿದಿನ ಯೋಗ ಮತ್ತು ಧ್ಯಾನ ಮಾಡುವ ಮೂಲಕ ದೇಹ ಸದೃಡರಾಗಿ ಇಟ್ಟುಕೊಳ್ಳಬೇಕು ಎಂದು ಬಳ್ಳಾರಿ ವಲಯ ಐಜಿಪಿ ಬಿ.ಎಸ್. ಲೋಕೇಶ್ ಕುಮಾರ್ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸುರಕ್ಷಿತೆ ಬಳ್ಳಾರಿಗಾಗಿ ‘ ಸದೃಢ ಪೊಲೀಸ್ ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಆರೋಗ್ಯ ಬಹಳ ಮುಖ್ಯವಾಗಿದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಪೊಲೀಸರು ಒತ್ತಡದ ಕೆಲಸದಿಂದ ಹೊರಬರದು, ಆರೋಗ್ಯದ ಕಡೆ ಗಮನ ಹರಿಸಬೇಕು. ಸದೃಢ ಆರೋಗ್ಯವೇ ಜೀವನದ ಸಂಪತ್ತು ಆಗಿದೆ ಎಂದು ಕಿವಿ ಮಾತು ಹೇಳಿದರು.
ಎಸ್ಪಿ ರಂಜಿತ್ ಕುಮಾರ ಬಂಡಾರು ಮಾತನಾಡಿ, ಬಿಐಎಂಐ ಆಕಾರದ ಮೇಲೆ ನೂರು ಜನರು ಆಯ್ಕೆ ಮಾಡಿ, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸ್ ಸಿಬ್ಬಂದಿ ಸದೃಢವಾಗಿರಲು 21 ದಿನಗಳ ಕಾಲ ತರಬೇತಿ ನೀಡಲಾಗುವುದು. ಕೆಲಸ ಒತ್ತಡ ತಗ್ಗಿಸಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅದ್ಯತೆ ನೀಡಲಾಗುವುದು. ಸುರಕ್ಷಿತೆ ಬಳ್ಳಾರಿಗಾಗಿ ಸದೃಢ ಪೊಲೀಸ್ ಎನ್ನುವ ಕಾರ್ಯಕ್ರಮವನ್ನು ಎಲ್ಲ ಸಿಬ್ಬಂದಿ ಸದುಪಯೋಗ ಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಗರಿ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಪಕಿ ಡಾ.ಶಿಲ್ಪಾ, ಎಸ್.ಆರ್.ಕೆ ಆಸ್ಪತ್ರೆಯ ಎಲುಬು ಮತ್ತು ಮೂಳೆ ತಜ್ಞ ಡಾ.ರಮೇಶ ಕುಮಾರ, ಪತಾಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕ ಪಂಪನಗೌಡ, ಸಿರುಗುಪ್ಪ ಗ್ರಾಮೀಣ ಡಿವೈಎಸ್ಪಿ ವೆಂಕಟೇಶ ಇದ್ದರು.