ಚಿಕ್ಕಬಳ್ಳಾಪುರ : ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಯೋಗ ತುಂಬಾ ಸಹಕಾರಿ ಎಂದು ಜಿಲ್ಲಾಧಿಕಾರಿ ಆರ್.ಲತಾ ಅಭಿಪ್ರಾಯಪಟ್ಟರು.
7ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸೋಮವಾರ ಜಿಲ್ಲಾಡಳಿತದ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆನ್‌ಲೈನ್ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಗ ಮಾಡಿದರೆ ರೋಗ ಬರುವುದಿಲ್ಲ. ಸುಮಾರು 5 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು ಉತ್ತಮ ಕಾರ್ಯ ನಿರ್ವಹಣೆ, ಆರೋಗ್ಯ ಸುಧಾರಣೆ, ಸಕಾರಾತ್ಮಕ ಭಾವನೆ ಬೆಳವಣಿಗೆಗೆ ಸಹಕಾರಿ ಎಂದು ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡರು.
ಯೋಗಾಭ್ಯಾಸದಿಂದ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದರೊಂದಿಗೆ ರೋಗಗಳ ಮೂಲ ಕಾರಣಗಳನ್ನು ನಿಯಂತ್ರಿಸಬಹುದಾಗಿದೆ. ಆಧುನಿಕ ಜೀವನ ಶೈಲಿ, ಒತ್ತಡದಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಉಸಿರಾಟದ ತೊಂದರೆಗಳು, ನಿದ್ರಾಹೀನತೆಯ ಜತೆಗೆ ಹಲವು ಸಮಸ್ಯೆಗಳು ಹೆಚ್ಚು ಕಂಡು ಬರುತ್ತಿವೆ. ಯೋಗಾಭ್ಯಾಸವು ಮನೋದೈಹಿಕ ರೋಗಗಳನ್ನು ದೂರವಿರಿಸಿ, ಆರೋಗ್ಯದಲ್ಲಿ ಸಮತೋಲನ ಸಾಧಿಸಲು ಸಹಕಾರಿ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್. ಅಮರೇಶ್, ನಗರ ಯೋಜನಾಭಿವೃದ್ಧಿ ನಿರ್ದೇಶಕ ಎಂ.ರೇಣುಕಾ, ಪೌರಾಯುಕ್ತ ಡಿ.ಲೋಹಿತ್ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ತಬೀಬಾ ಬಾನು ಮತ್ತಿತರರು ಇದ್ದರು.
45 ನಿಮಿಷ ಅಧಿಕಾರಿಗಳ ಯೋಗಾಭ್ಯಾಸ : ಯೋಗಾಭ್ಯಾಸದೊಂದಿಗೆ ಇರಿ! ಮನೆಯಲ್ಲಿಯೇ ಇರಿ! ಎಂಬ ಘೋಷಣೆಯ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನ ನರೇಂದ್ರ ಮೋದಿ ಆನ್‌ಲೈನ್ ಮೂಲಕ ಚಾಲನೆ ನೀಡುತ್ತಿದ್ದಂತೆ ಜಿಲ್ಲೆಯಲ್ಲೂ ಯೋಗಾಭ್ಯಾಸ ಪ್ರಾರಂಭವಾಯಿತು. ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಸಾಫ್ಟ್‌ಟೆಕ್ ಗೋವಿಂದ್ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೇರಿ ಹಲವು ಅಧಿಕಾರಿಗಳು 45 ನಿಮಿಷ ಕಾಲ ವಿವಿಧ ಆಸನಗಳನ್ನು ಮಾಡಿ, ಗಮನ ಸೆಳೆದರು. ಇದನ್ನು ಎನ್‌ಐಸಿ ಲಿಂಕ್ ಮೂಲಕ ಪ್ರದರ್ಶಿಸಲಾಯಿತು.