ಜಿಲ್ಲೆ

ಯೋಗದಲ್ಲಿ ಮಿಂದೆದ್ದ ಮಂಜಿನನಗರಿ : ಸಾಮೂಹಿಕ ಆಸನ ಪ್ರದರ್ಶನ ಧ್ಯಾನದೊಂದಿಗೆ ಸಂಕಲ್ಪ ಉಸಿರಾಟದ ಕ್ರಮಕ್ಕೆ ತಲೆಬಾಗಿದ ಜನತೆ


ಕೊಡಗು : ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜು ಹಾಗೂ ಎನ್.ಎಸ್.ಎಸ್. ಘಟಕದ ಸಹಭಾಗಿತ್ವದಲ್ಲಿ ಸೇಂಟ್ ಆನ್ಸ್ ಪದವಿ ಕಾಲೇಜು ಸಭಾಂಗಣದಲ್ಲಿ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಾಮೂಹಿಕ ಯೋಗ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಅಂತಾರಾಷ್ಟ್ರೀಯ ಯೋಗ ಶಿಕ್ಷಕಿ ಹನ್ಸಾ ಜೀವನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಎಂದರೆ ಶಾರೀರಿಕ ಆರೋಗ್ಯ ಮಾತ್ರ ಎಂದುಕೊಳ್ಳಲಾಗುತ್ತದೆ. ಆದರೆ ಮಾನಸಿಕ ಆರೋಗ್ಯವು ಮುಖ್ಯವಾಗುತ್ತದೆ. ಈ ಎರಡು ಬಗೆಯ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಸಹಕಾರಿಯಾಗಿದೆ. ಯೋಗ ಸುಮಾರು 5 ಸಾವಿರ ವರ್ಷಗಳ ಹಿಂದೆ ಆರಂಭವಾಯಿತು ಎಂದರು.


ಯೋಗದಲ್ಲಿ ಉಸಿರಾಟದ ತಂತ್ರಗಳು, ಆಸನಗಳು ಅಡಗಿವೆ. ನಮ್ಮ ದೇಹ ಮತ್ತು ಮನಸನ್ನು ಹದಗೊಳಿಸುವುದಲ್ಲದೇ, ಮನಸ್ಸು, ಉಸಿರು ಮತ್ತು ದೇಹವನ್ನು ಜತೆಯಾಗಿ ತೆಗೆದುಕೊಂಡು ಹೋಗುವುದೆ ನಿಜವಾದ ಯೋಗ ಎಂದರು.


ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆವರೆಂಡ್ ಫಾದರ್ ಐಸಾಕ್ ರತ್ನಾಕರ್ ಮಾತನಾಡಿ, ಈ ಬಾರಿಯ ಯೋಗದ ಘೋಷವಾಕ್ಯ ವಸುದೈವ ಕುಟುಂಬ, ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ಪರಿಕಲ್ಪನೆ. ಎಲ್ಲರೂ ಸೇರಿ ಉತ್ತಮ ಆರೋಗ್ಯವನ್ನು ಯೋಗದ ಮೂಲಕ ಪಡೆದುಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಬೇಕಿದೆ. ಇಡೀ ವಿಶ್ವಕ್ಕೆ ಯೋಗವನ್ನು ಕೊಟ್ಟಂಥ ನಮ್ಮ ದೇಶದಲ್ಲಿ ಯೋಗ ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧಿಗೆ ಬರುತ್ತಿದೆ. ಈಗಲಾದರೂ ಯೋಗವನ್ನು ಜೀವನ ಕ್ರಮವಾಗಿ ಎಲ್ಲರೂ ರೂಪಿಸಿಕೊಂಡಿದ್ದೇಯಾದರೆ ಎಲ್ಲರೂ ಆರೋಗ್ಯವಂತರಾಗಬಹುದು ಎಂದು ಅಭಿಪ್ರಾಯಪಟ್ಟರು.
ಸೇಂಟ್ ಆನ್ಸ್ ಪದವಿ ಕಾಲೇಜು ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಮಾತನಾಡಿ, ಯೋಗದ ಮೂಲಕ ಶಾರೀರಿಕ ಮತ್ತು ಮಾನಸಿಕ ಸಮತೋಲನ ಪಡೆಯಬಹುದು. ಒತ್ತಡ ನಿರ್ವಹಣೆ ಕೂಡ ಯೋಗದಿಂದಲೇ ಸಾಧ್ಯ ಎಂದು ಅಭಿಪ್ರಾಯಪಟ್ಟರು.


ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಎಸ್.ಎಸ್. ಯೋಜನಾಧಿಕಾರಿ ಅರ್ಜುನ್, ಯೋಗವೆಂದರೆ ವ್ಯಾಯಾಮ ಎನ್ನುವ ತಪ್ಪು ಕಲ್ಪನೆಯಿದೆ. ಆದರೆ ಯೋಗ ಭಾವನಾತ್ಮಕ ಚಿಂತನೆಯಿಂದ ಆರಂಭವಾಗುತ್ತದೆ ಎಂದರು.


ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶ ಮುಖ್ಯಸ್ಥೆ ಹೇಮಾ, ವಿಜಯವಾಣಿ ಜಿಲ್ಲಾ ವರದಿಗಾರ ಸುನೀಲ್ ಪೊನ್ನೇಟಿ, ವಿರಾಜಪೇಟೆ ವರದಿಗಾರ್ತಿ ಉಷಾ ಪ್ರೀತಂ ವೇದಿಕೆಯಲ್ಲಿದ್ದರು.


ಎನ್.ಎಸ್.ಎಸ್ ವಿದ್ಯಾರ್ಥಿನಿ ಸ್ನೇಹಾ ಕಾರ್ಯಕ್ರಮ ನಿರೂಪಿಸಿದರೆ, ದೀಕ್ಷಿತಾ ಸ್ವಾಗತ ಮಾಡಿದರು. ಎನ್. ಎಸ್ . ಎಸ್ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು.


ಸಭಾ ಕಾರ್ಯಕ್ರಮದ ಬಳಿಕ ಸುಮಾರು ಒಂದು ಗಂಟೆ ಕಾಲ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಯೋಗ ಶಿಕ್ಷಕಿ ಹನ್ಸಾ ಜೀವನ್ ಹಲವು ಸರಳ ಆಸನಗಳು, ಉಸಿರಾಟದ ಕ್ರಮಗಳು, ಸೂರ್ಯ ನಮಸ್ಕಾರ, ಧ್ಯಾನ ಮಾಡಿಸಿದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆವರೆಂಡ್ ಫಾದರ್ ಐಸಾಕ್ ರತ್ನಾಕರ್ ಕೂಡ ಯೋಗಾಸನ ಮಾಡಿದ್ದು ವಿಶೇಷವಾಗಿತ್ತು. ಬಳಿಕ ಸಮೂಹ ಯೋಗದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ಅಭಿನಂದನಾ ಪತ್ರವನ್ನು ಅತಿಥಿ ಗಣ್ಯರು ವಿತರಣೆ ಮಾಡಿದರು.