ಜಿಲ್ಲೆ

ಯೋಗ ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿ

Chitradurga - Desk - Pranav Kumar

ಚಿತ್ರದುರ್ಗ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯೋಗ ನಡಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿ ಮಾತನಾಡಿದರು.

ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಯೋಗವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಮಾತನಾಡಿ, ಜೂ. 21ರಂದು 10ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚು ಯೋಗಾಸಕ್ತರು ಭಾಗವಹಿಸಲಿದ್ದಾರೆ ಎಂದರು.

ಡಿಸಿ ಕಚೇರಿ ಬಳಿಯಿಂದ ಆರಂಭವಾದ ನಡಿಗೆ ರಂಗಯ್ಯನ ಬಾಗಿಲು, ಉಚ್ಚಂಗಿಯಲ್ಲಮ್ಮ ದೇಗುಲ, ಗಾಂಧಿವೃತ್ತ, ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಮಾಪನಗೊಂಡಿತು.

ಡಾ.ಗಿರೀಶ್, ನಾಗರಾಜ್ ನಾಯ್ಕ್‌, ಡಾ.ಪ್ರಶಾಂತ್, ಡಾ.ವಿಜಯಲಕ್ಷ್ಮಿ, ರವಿ ಅಂಬೇಕರ್, ನಾಗರಾಜ್ ಸಂಗಂ, ಜಿಲ್ಲೆಯ ಆಯುಷ್ ವೈದ್ಯಾಧಿಕಾರಿಗಳು, ಸಿಬ್ಬಂದಿ, ಜಿಲ್ಲೆಯ ಎಲ್ಲ ಯೋಗ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಅಮೃತ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ಯೋಗ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.