ಬೀದರ್: ಆರೋಗ್ಯಕರ ಜೀವನ ನಡೆಸುವಂತಾಗಲು ಯೋಗ ಪ್ರತಿಯೊಬ್ಬರ ಜೀವನದ ದೈನಂದಿನ ಚಟುವಟಿಕೆಯಾಗಬೇಕು ಎಂದು ಅಂತಾರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ಅಧ್ಯಕ್ಷ ಡಾ.ಅನಂತ ಬಿರಾದಾರ ಸಲಹೆ ನೀಡಿದರು.
ನಗರದ ಅಂತಾರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮನುಷ್ಯ ತನ್ನ ದೈನಂದಿನ ಕಾರ್ಯಚಟುವಟಿಕೆಯಲ್ಲಿ ತಲ್ಲೀನನಾಗಿ ಆರೋಗ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ಕೆಲಸದ ಒತ್ತಡಗಳಿಂದಾಗಿ ಅನೇಕ ರೋಗಗಳಿಗೆ ಸ್ವತಃ ತಾನೇ ಆಹ್ವಾನ ಮಾಡಿಕೊಳ್ಳುತ್ತಿದ್ದಾನೆ. ಆರೋಗ್ಯಕರ ಜೀವನ ಬೇಕೆನಿಸಿದಲ್ಲಿ ಎಷ್ಟೇ ಕೆಲಸದ ಒತ್ತಡವಿದ್ದರೂ ಪ್ರತಿ ದಿನ ಆರೋಗ್ಯಕ್ಕೆ ಒಂದು ಗಂಟೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಮಹಾತ್ಮ ಗಾಂಧೀಜಿಯವರೂ ಕೂಡ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸೆ ಬಗ್ಗೆ ಆಸಕ್ತಿ ಹೊಂದಿದ್ದರು. ಪ್ರಧಾನ ಮಂತ್ರಿ ಸೇರಿದಂತೆ ಅನೇಕ ಗಣ್ಯರು ಪ್ರತಿದಿನ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯಕರ ಜೀವನ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಹೀಗೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕುರಿತು ಎಚ್ಚರಿಕೆ ವಹಿಸಬೇಕಿದೆ ಎಂದರು.
ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ಮಾಧ್ಯಮ ಸಂಚಾಲಕ ಗುರುನಾಥ ರಾಜಗೀರಾ ಮಾತನಾಡಿ, ಅಂತಾರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಕೇಂದ್ರವು ಜಿಲ್ಲೆಯಲ್ಲಿ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸಾ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದೆ. ನಮ್ಮ ಪೂರ್ವಜರ ಜೀವನದ ಭಾಗವಾಗಿದ್ದ ಯೋಗದ ಮಹತ್ವದ ಬಗ್ಗೆ ಪ್ರತಿ ನಾಗಕರಿಕನಿಗೂ ತಿಳಿಸಬೇಕಿದೆ. ಆರೋಗ್ಯಕರ ಸಮಾಜ ನಿರ್ಮಾಣವೇ ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೇಂದ್ರದ ಜಿಲ್ಲಾಧ್ಯಕ್ಷ ಧೋಂಡಿರಾಮ್ ಚಾಂದಿವಾಲೆ, ಪ್ರಮುಖರಾದ ರವೀಂದ್ರ ಸೋರಳ್ಳಿ, ಭಾರ್ಗವ ಶರ್ಮಾ, ಶತೃಘನ್ ಕಶ್ಯಪ್ ಇತರರಿದ್ದರು.
ಚಿಕಿತ್ಸಾ ಕೇಂದ್ರದ ಪದಾಧಿಕಾರಿಗಳ ಆಯ್ಕೆ
ಅಂತಾರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಧೋಂಡಿರಾಮ್ ಚಾಂದಿವಾಲೆ (ಜಿಲ್ಲಾ ಅಧ್ಯಕ್ಷ), ಸ್ವರೂಪಾರಾಣಿ ಪಾಟೀಲ್, ಯೋಗೇಂದ್ರ ಯದಲಾಪೂರೆ, ರವೀಂದ್ರ ಚಿಲ್ಲರ್ಗಿ, ದುರ್ಗಾಲಕ್ಷ್ಮೀ ಗೋವಿಂದ (ಉಪಾಧ್ಯಕ್ಷರು), ಡಾ.ಷಣ್ಮುಖಪ್ಪ ಜಮಶೆಟ್ಟಿ (ಪ್ರಧಾನ ಕಾರ್ಯದರ್ಶಿ), ಅಜಯಕುಮಾರ ದುಬೆ, ನೀಲಮ್ಮಾ ಮಲ್ಲಿಕಾರ್ಜುನ, ಮೋಹನ ಯಳ್ನೂರಕರ್ (ಕಾರ್ಯದರ್ಶಿ), ಸಿಂಧುಮತಿ ಮಹಾದೇವಪ್ಪ (ಕೋಶಾಧ್ಯಕ್ಷೆ), ಸಂಗಶೆಟ್ಟಿ ಜಗದೇವ (ಸಹ ಕೋಶಾಧ್ಯಕ್ಷ), ಜಗನ್ನಾಥ ಬುಟ್ಟೆ (ಸಂಚಾಲಕ), ರಾಮಕೃಷ್ಣ ಮುನಿಗಲ್, ಮಹಾದೇವಪ್ಪ ಸೋಶೆಟ್ಟಿ, ಗಂಗಪ್ಪ ಸಾವಳೆ (ಪೋಷಕರು), ಎಂ.ಡಿ ಆರೀಫ್, ವಿಜಯಕುಮಾರ ಹಲಬಿಟ್ಟಿ, ಚಂದ್ರಶೇಖರ ಗಾದಾ, ಜ್ಯೋತಿ ಫುಲೇಕರ್ (ಕಾರ್ಯಕಾರಿಣಿ ಸದಸ್ಯರು) ಅವರನ್ನು ಆಯ್ಕೆ ಮಾಡಲಾಗಿದೆ.