ಜಿಲ್ಲೆ

ಯೋಗ ದಿನಾಚರಣೆ ಅಂಗವಾಗಿ ಜಾಥಕ್ಕೆ ನಗರಸಭೆ ಆಯುಕ್ತ ಸತೀಶ್ ಚಾಲನೆ

ಹಾಸನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಯೋಗ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಜಾಥಗೆ ನಗರಸಭೆ ಆಯುಕ್ತ ಸತೀಶ್ ಚಾಲನೆ ನೀಡಿದರು.

‘ವಸುದೈವ ಕುಟುಂಬಕಂ ಪ್ರತಿ ಮನೆಯ ಅಂಗಳದಲ್ಲೂ ಯೋಗ’ ಎನ್ನುವ ವೇದವಾಕ್ಯದೊಂದಿಗೆ ಯೋಗ ಜಾಥವು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರಟು ಬಿ.ಎಂ. ರಸ್ತೆ ಮೂಲಕ ಎನ್.ಆರ್. ವೃತ್ತಕ್ಕೆ ಬಂದು ಕೆಲ ಸಮಯ ಮಾನವ ಸರಪಳಿ ಮಾಡಿ ಯೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿದಿನ ಕೆಲ ಸಮಯ ಯೋಗಕ್ಕಾಗಿ ಮೀಸಲಿಟ್ಟರೇ ಜೀವನಪೂರ್ತಿ ಆರೋಗ್ಯ ಕಾಪಾಡಿಕೊಂಡು ಸಂತೋಷದಿಂದ ಇರಬಹುದು. ಯೋಗವನ್ನು ಜೀವನದಲ್ಲಿ ಕ್ರಮಬದ್ಧವಾಗಿ ಮೈಗೂಡಿಸಿಕೊಂಡರೇ ಜೀವನ ಆರೋಗ್ಯಮಯವಾಗಿರುತ್ತದೆ ಎಂದು ಹೇಳಿದರು.

ಪತಂಜಲಿ ಯೋಗ ಸಮಿತಿ ಪರಿವಾರದ ಶೇಷಪ್ಪ ಮಾತನಾಡಿ, ವಿಶ್ವ ಯೋಗ ದಿನದ ಅಂಗವಾಗಿ ಯೋಗ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವ ಶಾಂತಿಗಾಗಿ ಮತ್ತು ಆರೋಗ್ಯಕ್ಕಾಗಿ ಜಾಥ ಮಾಡಲಾಗುತ್ತಿದೆ. ಭಾರತ ಇಡೀ ವಿಶ್ವಕ್ಕೆ ಯೋಗ ಹಾಗೂ ಜ್ಞಾನವನ್ನು ನೀಡಿದಂತಹ ದೇಶ. ನಾವು ವರ್ಷದಲ್ಲಿ ಕೇವಲ ಒಂದು ದಿನ ಮಾತ್ರ ಯೋಗಗೆ ಸೀಮಿತವಾಗಬಾರದು. ವರ್ಷವಿಡಿ ಯೋಗ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಆಯುರ್ವೇದ ಆಸ್ಪತ್ರೆಯ ವೀಣಾ ಲತಾ, ಪತಂಜಲಿ ಯೋಗ ಪರಿವಾರದ ರಾಧಾ ತಿವಾರಿ, ಗಿರೀಶ್, ಆರೋಗ್ಯ ಇಲಾಖೆಯ ಮಂಜುನಾಥ್, ಭಾರತ್ ಸೇವಾದಳದ ಸಂಘಟಕರಾದ ವಿ.ಎಸ್. ರಾಣಿ, ಹಿರಿಯ ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.