ಜಿಲ್ಲೆ

ಯೋಗ ದರ್ಶನವಾಗಲಿ, ಪ್ರದರ್ಶನವಲ್ಲ

ಚಿತ್ರದುರ್ಗ: ಯೋಗ ದರ್ಶನವಾಗಬೇಕು, ಪ್ರದರ್ಶನವಾಗಬಾರದೆಂದು ಯೋಗಗುರು, ವೈದ್ಯಶ್ರೀ ಚನ್ನಬಸವಣ್ಣ ಹೇಳಿದರು.
ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮಠದಲ್ಲಿ ಆಯೋಜಿಸಿರುವ ಯೋಗ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ನಮ್ಮ ಮನಸ್ಸು-ದೇಹ ಶುದ್ಧೀಕರಣಗೊಳ್ಳಬೇಕೆಂದರು.
ತನು, ಮನ, ನಡೆ, ನುಡಿ ಹಾಗೂ ಭಾವದ ಶುದ್ಧಿಯಾಗಬೇಕು. ಮನಸ್ಸಿನಲ್ಲಿ ನಗಬೇಕು. ನಗುವಿನಲ್ಲಿ ಭಾವವಿರಬೇಕು. ನಗು ನಮ್ಮ ಮನಸ್ಸನ್ನು ವಿಕಸನಗೊಳಿಸುತ್ತದೆ. ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಕೋಪ ತಾಪಕ್ಕೆ ಕಾರಣವಾಗುತ್ತದೆ. ಕೋಪ-ತಾಪದಿಂದ ಶರೀರ ರೋಗಗಳಿಗೆ ನೆಲೆಯಾಗುತ್ತದೆ. ಕೋಪವನ್ನು ಯೋಗದ ಮೂಲಕ ನಿಯಂತ್ರಿಸಿಕೊಳ್ಳಬೇಕು. ಯೋಗಿಗಳಾದವರು ಪ್ರಸನ್ನರಾಗಿರುತ್ತಾರೆ ಎಂದರು.
ಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಚನ್ನಬಸವಣ್ಣನವರು ನಿತ್ಯ 150ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡುತ್ತಾರೆ. ತಮ್ಮ ಕೆಲಸಗಳ ಒತ್ತಡದ ನಡುವೆಯೂ ಯೋಗ ಹಾಗೂ ಪ್ರವಚನ ನಡೆಸಿಕೊಡುತ್ತಿದ್ದಾರೆ. ನಿತ್ಯ ಬೆಳಗ್ಗೆ ಯೋಗಾಭ್ಯಾಸ, ಸಂಜೆ ಆರೋಗ್ಯ ಅಧ್ಯಾತ್ಮ ಪ್ರವಚನವಿರುತ್ತದೆ ಎಂದು ತಿಳಿಸಿದರು.
ಚಿತ್ರದುರ್ಗ ಯೋಗಾಚಾರ‌್ಯ ಎಲ್.ಎಸ್ ಚಿನ್ಮಯಾನಂದ, ನಗರದ ಯೋಗ ತರಬೇತುದಾರರಾದ ಎಂ.ಬಿ.ಮುರಳಿ, ವೆಂಕಟೇಶ್, ಪ್ರಸನ್ನಕುಮಾರ್, ಕೆಂಚವೀರಪ್ಪ, ರವಿ ಅಂಬೇಕರ್, ರುದ್ರೇಶ್, ಮಂಜುಳಾ, ವಸಂತಲಕ್ಷ್ಮಿ, ಮಂಜುನಾಥ್, ಪ್ರಾಚಾರ್ಯರಾದ ಡಾ.ಪಿ.ಬಿ.ಭರತ್, ಪಿ.ಎಂ.ಜಿ.ರಾಜೇಶ್ ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಪ್ರೊ.ಆರ್.ಎಸ್.ಜಯದೇವಪ್ಪ ಸ್ವಾಗತಿಸಿದರು. ಪ್ರೊ.ಎಸ್.ಚೇತನ್ ವಂದಿಸಿದರು.

*ಇಂದು ಜಂಗೀಕುಸ್ತಿ ಪೂರ್ವಭಾವಿ ಸಭೆ
ಜಯದೇವ ಜಂಗಿ ಕುಸ್ತಿ ಏರ್ಪಡಿಸುವ ಹಿನ್ನೆಲೆಯಲ್ಲಿ ಮಠದಲ್ಲಿ ಪೂರ್ವಭಾವಿ ಸಭೆಯನ್ನು ಸೆ.26 ರ ಸಂಜೆ 5 ಕ್ಕೆ ಆಯೋಜಿಸಿದ್ದು, ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಸಮ್ಮುಖ ವಹಿಸುವರು. ಕುಸ್ತಿಪಟುಗಳು, ಕ್ರೀಡಾಭಿಮಾನಿಗಳು ಸಭೆಗೆ ಆಗಮಿಸಿ ಸಲಹೆ, ಸಹಕಾರ ನೀಡಬೇಕೆಂದು ಪ್ರಕಟಣೆ ಕೋರಿದೆ. ಹೆಚ್ಚಿನ ಮಾಹಿತಿಗಾಗಿ 9845396588ನ್ನು ಸಂಪರ್ಕಿಸಬಹುದು.