ಹಾತೂರು ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ಯೋಗ ಕೇಂದ್ರ ಕಟ್ಟಡ ತೀರಾ ಕಳಪೆಯಾಗಿದೆ ಎಂದು ಆರೋಪಿಸಿ, ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದರು. 
ಜಿಲ್ಲೆ

ಯೋಗ ಕೇಂದ್ರದ ಕಟ್ಟಡ ಕಾಮಗಾರಿ ಕಳಪೆ

ಗೋಣಿಕೊಪ್ಪ: ಹಾತೂರು ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ಯೋಗ ಕೇಂದ್ರ ಕಟ್ಟಡ ತೀರಾ ಕಳಪೆಯಾಗಿದ್ದು, ಕಾಮಗಾರಿಯನ್ನು ತಕ್ಷಣ ತಡೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಸ್ಥರ ವಿರೋಧದ ನಡುವೆಯೂ ಹಾತೂರು ಗ್ರಾಮ ಪಂಚಾಯಿತಿ ಸಮೀಪ ಸುಮಾರು 4 ಲಕ್ಷ ರೂ. ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಕಳಪೆಯಾಗಿದೆ. ಗುಣಮಟ್ಟ ಪರಿಶೀಲನೆಗೆ ಕ್ರಮಕೈಗೊಳ್ಳಬೇಕೆಂದು ಗುರುವಾರ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಒತ್ತಾಯಿಸಿದರು.

ಕೇಳಪಂಡ ರಾಕೇಶ್ ಅಪ್ಪಯ್ಯ ಮಾತನಾಡಿ, ಜಿಎಸ್‌ಟಿ ಕಳೆದು 3.56 ಲಕ್ಷ ರೂ. ಹಣದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಿಸಬಹುದು. ಆದರೆ, 27 ಚದರ ಮೀಟರ್ ಸುತ್ತಳತೆಯ ಕಟ್ಟಡದ ಅಡಿಪಾಯವನ್ನು ಒಂದೇ ದಿನ ಕಟ್ಟಲಾಗಿದೆ. ತರಾತುರಿಯಲ್ಲಿ ನಿರ್ಮಿಸಿರುವ ಕಂಬದಲ್ಲಿ 9ಕ್ಕೂ ಹೆಚ್ಚು ಬಿರುಕುಗಳಿವೆ. ಗೋಡೆ ಮುಟ್ಟಿದ ತಕ್ಷಣ ಕುಸಿಯುತ್ತಿದೆ. ಒಳಭಾಗದ ನೆಲದಲ್ಲಿರುವ ಮರದ ಬುಡವನ್ನು ತೆಗೆಯದೆ ನೆಲಹಾಸು ಹಾಕಲು ಮುಂದಾಗಿದ್ದಕ್ಕೆ ಕೂಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಕಾರಣ, ಸ್ಥಗಿತಗೊಂಡಿದೆ. ಛಾವಣಿಗೆ ಆರ್‌ಸಿಸಿ ಹಾಕಬೇಕೆಂಬ ನಿಯಮವಿದೆ. ಆದರೂ, ಶೀಟ್ ಹಾಕಿ ಪೂರ್ಣಗೊಳಿಸಲಾಗುತ್ತಿದೆ. ಈ ಬಗ್ಗೆ ಕೂಡ ಸ್ಪಷ್ಟನೆ ದೊರೆಯುತ್ತಿಲ್ಲ ಎಂದು ದೂರಿದರು.

ಸ್ಥಳೀಯ ಪಿಡಿಒ ಕಾಮಗಾರಿ ಕಳಪೆಯಾಗಿದೆ ಲಿಖಿತವಾಗಿ ಆರೋಗ್ಯ ಇಲಾಖೆಗೆ ತಿಳಿಸಿದ್ದಾರೆ. ಆದರೂ, ಗುತ್ತಿಗೆದಾರ ಅಣ್ಣಪ್ಪ ಇದೇ ಕಟ್ಟಡವನ್ನು ಮುಂದುವರಿಸುವ ಕಾರ್ಯಕ್ಕೆ ಮುಂದಾಗಿರುವುದನ್ನು ನಾವು ವಿರೋಧಿಸುತ್ತೇವೆ. ಗುಣಮಟ್ಟದ ಕಟ್ಟಡ ನಿರ್ಮಿಸಬೇಕು ಎಂದು ಒತ್ತಾಯಿಸಿದರು.