ಜಿಲ್ಲೆ

ಯೋಗಾಸನ ಮಾಡಿದ ಶಾಸಕ

Dharwad

ಹುಬ್ಬಳ್ಳಿ: ಬೆಳಗ್ಗೆ ಸ್ವಲ್ಪ ಕಾಲ್ನಡಿಗೆ, ಕಪಾಲಭಾತಿ, ಪ್ರಾಣಾಯಾಮ, ಶೀರ್ಷಾಸನ...

ಇದು ಇಲ್ಲಿನ ಕಿಮ್ಸ್​ನ ಕೋವಿಡ್ ವಾರ್ಡ್​ನಲ್ಲಿರುವ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರ ದಿನಚರಿಯ ಆರಂಭ.

ನಂತರ ತಮ್ಮ ಬೆಡ್ ಕಡೆ ಬಂದು ಚಹಾ, ಉಪಾಹಾರವನ್ನು ಸೇವಿಸಿ, ಕೆಲ ಪುಸ್ತಕಗಳ ಪುಟ ತಿರುವಿ ಹಾಕಿದರು. ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು ಎಂದು ತಿಳಿದುಬಂದಿದೆ.

ಶಾಸಕರು ಮುಖಕ್ಕೆ ಮಾಸ್ಕ್ ಧರಿಸಿಯೇ ಓಡಾಡುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಬಂದಾಗ ಅಗತ್ಯವಿದ್ದಷ್ಟೇ ಮಾತನಾಡಿ ಕಳುಹಿಸುತ್ತಿದ್ದಾರೆ. ಮಾಸ್ಕ್ ಸೇರಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ನಗುಮೊಗದಿಂದಲೇ ಅಲ್ಲಿದ್ದ ಸೋಂಕಿತರನ್ನು ಮಾತನಾಡಿಸುತ್ತಿದ್ದಾರೆ. ಅಲ್ಲಿದ್ದವರಿಗೆ ಧೈರ್ಯ ತುಂಬುತ್ತಿದ್ದಾರೆ. ಸಾಮಾನ್ಯ ವಾರ್ಡ್ ಬಳಿ ಒಂದು ಚಿಕ್ಕ ಕೊಠಡಿ ಇದ್ದು, ಅಲ್ಲಿಯೇ ವಾಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಕುಟುಂಬ ಕ್ವಾರಂಟೈನ್: ಶಾಸಕ ಪ್ರಸಾದ ಅಬ್ಬಯ್ಯಗೆ ಕೋವಿಡ್ ದೃಢಪಟ್ಟಿರುವುದರಿಂದ ಕುಟುಂಬದವರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ವರದಿ ಬರುವವರೆಗೆ ಅಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಆಗಾಗ ವೈದ್ಯಕೀಯ ಸಿಬ್ಬಂದಿ ತೆರಳಿ ಸಲಹೆ ನೀಡುತ್ತಿದ್ದಾರೆ ಎನ್ನಲಾಗಿದೆ.

ಶಾಸಕ ಪ್ರಸಾದ ಜೊತೆ ಹಲವರ ಸಂಪರ್ಕ

ಧಾರವಾಡ: ಹುಬ್ಬಳ್ಳಿ- ಧಾರವಾಡ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ, ಸ್ವತಃ ಅವರೇ ತಮ್ಮನ್ನು ಭೇಟಿಯಾದವರಲ್ಲಿ ಕರೊನಾ ಲಕ್ಷಣ ಕಂಡುಬಂದರೆ ಪರೀಕ್ಷೆಗೆ ಒಳಪಡಲು ವಿನಂತಿಸಿದ್ದಾರೆ. ಮತ್ತೊಂದೆಡೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ, ಶಾಸಕರ ಸಂಪರ್ಕದಲ್ಲಿ ಬಂದವರನ್ನು ಪತ್ತೆ ಮಾಡಲಾಗುತ್ತಿದೆ. ಸಮೀಪದ ಸಂಪರ್ಕಕ್ಕೆ ಬಂದವರ ಅಂತಿಮ ಪಟ್ಟಿ ಸಿದ್ಧವಾಗುತ್ತಿದ್ದು, ಭಾನುವಾರದಿಂದ ಕ್ವಾರಂಟೈನ್​ಗೆ ಸೂಚಿಸಲಾಗುವುದು ಎಂದು ಕ್ವಾರಂಟೈನ್ ನೋಡಲ್ ಅಧಿಕಾರಿ ವಿನಾಯಕ ಪಾಲನಕರ ತಿಳಿಸಿದ್ದಾರೆ.