ಜಿಲ್ಲೆ

ಯೋಗ ಶಿಬಿರಕ್ಕೆ ಎಲ್ಲ ರೀತಿಯ ನೆರವು

ಹುಬ್ಬಳ್ಳಿ: ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಪತಂಜಲಿ ಯೋಗ ಪೀಠದ ಸಂಸ್ಥಾಪಕ ಬಾಬಾ ರಾಮದೇವ ಅವರು ಹುಬ್ಬಳ್ಳಿಯಲ್ಲಿ ನಡೆಸಿಕೊಡಲಿರುವ ಯೋಗ ಶಿಬಿರಕ್ಕೆ ತಮ್ಮ ಇಲಾಖೆಯಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ನೈಋತ್ಯ ರೈಲ್ವೆ ವಲಯ ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಅವರು ವಾಗ್ದಾನ ನೀಡಿದರು.

ಬಾಬಾ ರಾಮದೇವ ಅವರ ಬೃಹತ್ ಯೋಗ ಶಿಬಿರದ ಅಂಗವಾಗಿ ಇಲ್ಲಿನ ಗದಗ ರಸ್ತೆಯ ರೈಲ್ವೆ ಉದ್ಯಾನದಲ್ಲಿ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿದ್ದ 161ನೇ ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಲಾಖೆಯ ಸಿಬ್ಬಂದಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ ಕಲಿತು ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಅವರು ಶಿಬಿರದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ವಿವಿಧ ಯೋಗಾಸನಗಳನ್ನು ಎಲ್ಲರರಿಗೂ ಪ್ರಾಯೋಗಿಕವಾಗಿ ವಿವರಿಸಿದರು. ಯೋಗದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ರೈಲ್ವೆ ಇಲಾಖೆಯ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡ, ಸಂತೋಷ, ಸಿಬ್ಬಂದಿ, ಪತಂಜಲಿ ಯೋಗ ಶಿಕ್ಷಕರು ಇತರರು ಉಪಸ್ಥಿತರಿದ್ದರು.

ವಿವಿಧೆಡೆ ಜಾಥಾ: ಪತಂಜಲಿ ಯೋಗ ಸಮಿತಿ ಮಹಿಳಾ ಘಟಕದ ಆಶ್ರಯದಲ್ಲಿ ಜೆಸಿ ನಗರದ ಎಸ್​ಜೆಎಂವಿಎಸ್

ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಬೆಳಗ್ಗೆ ಹಲವು ಸ್ಥಳಗಳಲ್ಲಿ ಯೋಗ ಜಾಥಾ ನಡೆಸಿದರು. ಕೇಶ್ವಾಪುರದ ವಿವಿಧ ಸ್ಥಳ ಹಾಗೂ ಪಾಂಡುರಂಗ ಕಾಲನಿಯಲ್ಲೂ ಪ್ರಚಾರ ಜಾಥಾಗಳು ನಡೆದವು. ಪತಂಜಲಿ ಯೋಗ ಸಮಿತಿ ಮಹಿಳಾ ಘಟಕದ ಉತ್ತರ ಕರ್ನಾಟಕ ಮಹಿಳಾ ಪ್ರಭಾರಿ ಆರತಿ ಕಾನಗೂ, ವಿಜಯಾ ಉಡುಪಿ, ಅಂಜನಮ್ಮ ಇತರರು ಉಪಸ್ಥಿತರಿದ್ದರು.