ಜಿಲ್ಲೆ

ಯೇಸು ಅನುಯಾಯಿಗಳಿಂದ ಪಾದಯಾತ್ರೆ

Bidar

ಬೀದರ್: ಕ್ರಿಸ್‍ಮಸ್ ಅಂಗವಾಗಿ ಯೇಸು ಅನುಯಾಯಿಗಳು ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದಿಂದ ಬೀದರ್ ವರೆಗೆ ಅಲಂಕೃತ ವಾಹನದಲ್ಲಿ ಯೇಸು ಕ್ರಿಸ್ತರ ಭಾವಚಿತ್ರದೊಂದಿಗೆ ಪಾದಯಾತ್ರೆ ನಡೆಸಿದರು.
ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಅಸೋಸಿಯೇಷನ್ ರಾಜ್ಯ ಅಧ್ಯಕ್ಷರೂ ಆದ ಬಿಡಿಎ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಚಾಲನೆ ನೀಡಿದರು.
ಪಾದಯಾತ್ರೆಯು ಮನ್ನಾಎಖ್ಖೆಳ್ಳಿ, ಬಗದಲ್, ಕಾಡವಾದ, ಕಮಠಾಣ, ಚಿದ್ರಿ ಮಾರ್ಗವಾಗಿ ಬೀದರ್‍ನ ಅಂಬೇಡ್ಕರ್ ವೃತ್ತಕ್ಕೆ ತಲುಪಿ ಸಮಾರೋಪಗೊಂಡಿತು.
ಮಾರ್ಗ ಮಧ್ಯದ ಗ್ರಾಮಗಳಲ್ಲಿ ಪಾದಯಾತ್ರೆಗೆ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಗ್ರಾಮಗಳ ಎಲ್ಲ ಸಮುದಾಯಗಳ ಮಹಾ ಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಕೇಕ್ ಕತ್ತರಿಸಿ ಹಬ್ಬದ ಶುಭ ಕೋರಲಾಯಿತು. ವಾದ್ಯ ಮೇಳ, ವೇಷಧಾರಿಗಳು ಪಾದಯಾತ್ರೆಯ ಮೆರುಗು ಹೆಚ್ಚಿಸಿದರು.
ಪಾಸ್ಟರ್‍ಗಳಾದ ಪ್ರವೀಣ, ಸುರೇಶ ಚಟ್ನಳ್ಳಿ, ಮನೋಹರ ಜ್ಯಾಂತಿ, ಮನೋಹರ ನೌಬಾದ್, ಮುಖಂಡರಾದ ಜಾನ್ಸನ್ ಮೋದಿ, ಪ್ರಶಾಂತ ಗುತ್ತೇದಾರ್, ಜೀವನ್ ಚಿದ್ರಿ, ಜಗದೀಶ್ ಚಿದ್ರಿ, ಸಬಸ್ಟಿನ್, ಜಾಕೋಬ್, ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ವಿವಿಧ ಗ್ರಾಮಗಳ ಪ್ರಮುಖರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.