ಜಿಲ್ಲೆ

ಯೂರಿಯಾಕ್ಕಾಗಿ ರೈತರ ಪರದಾಟ

reportermys

ಹಾಸನ: ಒಂದು ಚೀಲ ಯೂರಿಯಾ ಗೊಬ್ಬರ ಪಡೆಯುವುದಕ್ಕೆ ಬೆಳಗಿನಿಂದ ಸಂಜೆಯವರೆಗೆ ಸರದಿ ಸಾಲಲ್ಲಿ ನಿಂತು ಕಾದರೂ ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಯೂರಿಯಾ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಗುರುವಾರ ನಗರದ ಸಂತೆಪೇಟೆಯಲ್ಲಿರುವ ಕೇಂದ್ರ ಸಗಟು ಮಾರಾಟ ಸಂಸ್ಥೆಯ ಗೊಬ್ಬರ ಮತ್ತು ಕ್ರಿಮಿನಾಶಕ ವಿಭಾಗದ ಎದುರು ಪ್ರತಿಭಟನೆ ನಡೆಸಿದರು.


ಹಾಸನ ತಾಲೂಕಿನ ರೈತರಿಗೆ ಒಂದು ಕಡೆ ಮಾತ್ರ ಯೂರಿಯಾ ನೀಡಲಾಗುತ್ತಿದೆ. ಹತ್ತು ಎಕರೆ ಇದ್ದವರಿಗೂ ಒಂದು ಚೀಲ ಮತ್ತು 10 ಗುಂಟೆ ಭೂಮಿ ಇದ್ದ ರೈತರಿಗೂ ಒಂದು ಚೀಲ ಯೂರಿಯಾ ಕೊಡಲಾಗುತ್ತಿದೆ. ಇದನ್ನು ಪಡೆಯಲು ಇಡೀ ದಿನ ಕಾಯಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿ ಹೋಬಳಿ ಮಟ್ಟದಲ್ಲಿ ಅಗತ್ಯ ಗೊಬ್ಬರ ವಿತರಣೆಗೆ ಕ್ರಮ ಕೈಗೊಂಡರೆ ರೈತರಿಗೆ ಅನುಕೂಲವಾಗುತ್ತದೆ. ಆದರೆ ಆ ಕೆಲಸ ಮಾಡುತ್ತಿಲ್ಲ. ಕೃಷಿ ಇಲಾಖೆ ಜಂಟಿ ನಿರ್ದೆಶಕರಿಗೆ ದೂರು ನೀಡಿದರೆ, ‘ಗೊಬ್ಬರ ಸಾಕಷ್ಟು ದಾಸ್ತಾನಿದೆ, ರೈತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳುತ್ತಾರೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ ಎಂದು ರೈತ ಮುಖಂಡ ಪ್ರವೀಣ್ ಗೌಡ ಕಿಡಿಕಾರಿದರು.


ಒಂದು ಚೀಲ ಯೂರಿಯಾಕ್ಕೆ 266 ರೂ. ಬೆಲೆ ಇದ್ದರೆ, ಸರ್ಕಾರಿ ಮಳಿಗೆಯಲ್ಲೇ 280 ರೂ.ಗಳನ್ನು ವಸೂಲು ಮಾಡಲಾಗುತ್ತಿದೆ. ಗೊಬ್ಬರ ಪಡೆಯಲು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸಾಲು ಮಾಡದೆ ಇರುವುದರಿಂದ ನೂಕು ನುಗ್ಗಲು ಉಂಟಾಗಿ ಮಹಿಳೆಯರು ಕಿರಿಕಿರಿ ಅನುಭವಿಸುವಂತಾಗಿದೆ ಎಂದರು.