ಬೀದರ್: ರಷ್ಯಾ ದಾಳಿಗೆ ತತ್ತರಿಸಿರುವ ಯೂಕ್ರೇನ್ನಲ್ಲಿ ವೈದ್ಯ ವಿದ್ಯಾರ್ಥಿಗಳು ಸೇರಿ ಬೀದರ್ ಜಿಲ್ಲೆಯ ಹಲವರು ಇರುವುದು ಪತ್ತೆಯಾಗಿದೆ.
ಯೂಕ್ರೇನ್ನ ಖಾರ್ಕಿವ್ ನಗರದಲ್ಲಿನ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಜಿಲ್ಲೆಯ ಹಲವು ವಿದ್ಯಾರ್ಥಿಗಳು ತೆರಳಿದ್ದು, ಸದ್ಯದ ಮಾಹಿತಿ ಪ್ರಕಾರ ಈ ವಿವಿಯಲ್ಲಿ ಬೀದರ್ನ ಮೂವರು ವಿದ್ಯಾರ್ಥಿಗಳಿದ್ದು, ರಷ್ಯಾ ದಾಳಿಯಿಂದ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ಬೀದರ್ ನಗರದ ಅಮಿತ್ ಸಿರಂಜೆ, ಬಸವಕಲ್ಯಾಣದ ವೈಷ್ಣವಿ ಸೇರಿ ಮೂವರು ಆತಂಕದಲ್ಲಿ ದಿನದೂಡಬೇಕಾಗಿದೆ. ಖಾರ್ಕಿವ್ನಲ್ಲಿ ಗುರುವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಗಡಿಯಿಂದ ಕೇವಲ 60 ಕಿಮೀ ದೂರದಲ್ಲಿರುವ ಖಾರ್ಕಿವ್ ನಗರ ರಷ್ಯಾದ ಮುಂದಿನ ಟಾರ್ಗೇಟ್ ಎಂದು ಹೇಳಲಾಗುತ್ತಿದೆ.
ಬೀದರ್ ಮೂಲದ ವಿದ್ಯಾರ್ಥಿಗಳು ಸ್ವದೇಶಕ್ಕೆ ಬರಲು ಮಾರ್ಚ್ ಮೊದಲ ವಾರ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಆದರೆ ರಷ್ಯಾದ ದಿಢೀರ್ ದಾಳಿಯಿಂದ ಖಾರ್ಕಿವ್ ವಿಮಾನ ನಿಲ್ದಾಣ ಬಂದ್ ಮಾಡಿದ್ದೇ ಆತಂಕಕ್ಕೆ ಕಾರಣವಾಗಿದೆ.
ಅಮಿತ್ ಸಿರಂಜೆ ಖಾರ್ಕಿವ್ ವಿವಿಯಲ್ಲಿ ಎಂಬಿಬಿಎಸ್ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದಾನೆ. ಭಾಲ್ಕಿ ಕರಡ್ಯಾಳ ಗುರುಕುಲದಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದ ಈತ, ಕಳೆದ ಆಗಸ್ಟ್ನಲ್ಲಿ ಇಲ್ಲಿಗೆ ಬಂದಿದ್ದ. ಯೂಕ್ರೇನ್ನಲ್ಲಿ ಯುದ್ಧದ ಕಾರ್ಮೋಡ ಕವಿದ ನಂತರ ಮಾ.7ಕ್ಕೆ ಭಾರತಕ್ಕೆ ಹಿಂತಿರುಗಲು ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಲಾಗಿತ್ತು. ಆದರೆ ದಿಢೀರ್ ದಾಳಿಯಿಂದ ವಿಮಾನ ಬಂದ್ ಆಗಿದ್ದು ಆತಂಕ ಮೂಡಿಸಿದೆ ಎಂದು ವಿಜಯವಾಣಿಗೆ ಅಮಿತ್ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ವ್ಯಾಸಂಗಕ್ಕೆ ಯೂಕ್ರೇನ್ನ ಖಾಕರ್ಿವ್ ವಿವಿ ಹೆಸರುವಾಸಿ. ಹೀಗಾಗಿ ಇಲ್ಲಿಗೆ ಪ್ರತಿವರ್ಷ ಬೀದರ್ ಸೇರಿ ರಾಜ್ಯದಿಂದ ಹಲವರು ಪ್ರವೇಶ ಪಡೆಯುತ್ತಾರೆ. ವಿದ್ಯಾರ್ಥಿಗಳಿಗಾಗಿ ಕೂಡಲೇ ವಿಶೇಷ ವಿಮಾನ ವ್ಯವಸ್ಥೆ ಮಾಡಿ ಸ್ವದೇಶಕ್ಕೆ ಕರೆದುಕೊಂಡು ಬರಬೇಕು ಎಂಬುದು ಅಮಿತ್ ಒತ್ತಾಯವಾಗಿದೆ.
ಯೂಕ್ರೇನ್ನ ಖಾರ್ಕಿವ್ ನಗರದಲ್ಲಿ ಗುರುವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದ್ದು, ಮುಂದಿನ ಟಾರ್ಗೇಟ್ ಇದೇ ನಗರ ಎಂದು ಹೇಳಲಾಗುತ್ತಿದೆ. ಕೂಡಲೇ ಭಾರತ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಮಾಡಿ ಖಾರ್ಕಿವ್ ವಿವಿಯಲ್ಲಿನ ಎಲ್ಲ ವಿದ್ಯಾರ್ಥಿಗಳನ್ನು ಕರೆತರಲು ವ್ಯವಸ್ಥೆ ಮಾಡಬೇಕು.
| ಅಮಿತ್ ಸಿರಂಜೆ, ಯೂಕ್ರೇನ್ನಲ್ಲಿರುವ ಬೀದರ್ ವೈದ್ಯ ವಿದ್ಯಾರ್ಥಿ