ಜಿಲ್ಲೆ

ಯುವಶಕ್ತಿಯಿಂದ ದೇಶ ಭವಿಷ್ಯ ಉಜ್ವಲ, ನೆಲಮಂಗಲದಲ್ಲಿ ಯುವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಾಲಾಜಿ ಅಭಿಮತ

Bengaluru Rural

ನೆಲಮಂಗಲ: ದೇಶದ ಭವಿಷ್ಯವನ್ನು ಮುನ್ನಡೆಸುವಲ್ಲಿ ಯುವ ಸಮುದಾಯದ ಪಾತ್ರ ಮಹತ್ವವಾದದ್ದು ಎಂದು ಯುವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಸ್.ಬಾಲಾಜಿ ಅಭಿಪ್ರಾಯಪಟ್ಟರು.

ನಗರದ ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಗ್ರಾಮಾಂತರ ಜಿಲ್ಲಾ ನೆಹರು ಯುವಕೇಂದ್ರ ಹಾಗೂ ತಾಲೂಕು ಮಾತೃಭೂಮಿ ಯುವಕರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಸಮಾವೇಶದಲ್ಲಿ ಮಾತನಾಡಿದರು.

ದೇಶದಾದ್ಯಂತ 14 ರಾಜ್ಯದಲ್ಲಿ ಮಾತೃಭೂಮಿ ಯುವಕ ಸಂಘ ಕಾರ್ಯ ನಿರ್ವಹಿಸುತ್ತಿದ್ದು, ಲಕ್ಷಾಂತರ ಮಂದಿ ಯುವಕರಿಗೆ ದಾರಿ ದೀಪವಾಗಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಯುವಜನತೆ ಸದುಪಯೋಗ ಪಡಿಸಿಕೊಂಡು ಸಬಲರಾಗಬೇಕು ಎಂದರು.

ನೆಹರು ಯುವಕೇಂದ್ರ ಆರಂಭವಾಗಿ ಲಕ್ಷಾಂತರ ಮಂದಿ ಯುವ ಸಂಘಟನೆಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಸಂತಸದ ಸಂಗತಿ. ಕೇಂದ್ರ ಸರ್ಕಾರ ಕಾರ್ಮಿಕ ಯುವ ಸಮುದಾಯ ಹಾಗೂ ವಿವಿಧ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಯುವ ನೀತಿಯನ್ನು ಮತ್ತಷ್ಟು ಪ್ರಬಲಗೊಳಿಸಲು ಮುಂದಾಗಿರುವುದು ಸಂತಸದ ಸಂಗತಿ ಎಂದರು.

ಸಿಂಚನಾ ಕಲಾಕೇಂದ್ರ ಟ್ರಸ್ಟ್ ಅಧ್ಯಕ್ಷ ಸಿ.ಎಚ್.ಸಿದ್ದಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಯುವಜನರ ಕ್ಷೇಮಾಭಿವೃದ್ಧಿಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಆಧುನಿಕ ಯುಗದಲ್ಲಿ ಯುವಜನತೆಗೆ ಸಾಕಷ್ಟು ಅವಕಾಶಗಳಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪ್ರಚಲಿತ ವಿದ್ಯಾಮಾನದಲ್ಲಿ ಯುವಜನತೆ ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಮಾರು ಹೋಗುತ್ತಿರುವುದು ಬೇಸರ ಸಂಗತಿ. ವಿದ್ಯಾರ್ಥಿಗಳು ಎಚ್ಚೆತ್ತು ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಲಕ್ಷಾಂತರ ಮಂದಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ಅವರ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬೇಕಿದೆ. ಜತೆಗೆ ಪರೀಕ್ಷೆಗಳು ಹತ್ತಿರವಾಗುತ್ತಿದ್ದು, ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ಧರಾಗಬೇಕು ಎಂದರು.

ಜಾನಪದ ಬುಡ್ಡಕಟ್ಟು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಅನಿಯೂರು ಚಂದ್ರಪ್ಪ, ಅಂತಾರಾಷ್ಟ್ರೀಯ ಯೋಗಪಟು ಅಮರ್‌ನಾಥ್, ಮಾತೃಭೂಮಿ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗರಾಜು, ಉಪಾಧ್ಯಕ್ಷ ರಾಕೇಶ್, ಖಜಾಂಚಿ ಸರಸ್ವತಿ, ಕಾರ್ಯದರ್ಶಿ ನವೀನ್‌ಕುಮಾರ್ ಸದಸ್ಯರಾದ ಚೇತನ್, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.