ಬೀದರ್: ಯುವಶಕ್ತಿ ಸದ್ಬಳಕೆಯಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯವಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅಭಿಪ್ರಾಯಪಟ್ಟರು.
ನೆಹರೂ ಯುವ ಕೇಂದ್ರದ ವತಿಯಿಂದ ನಗರದ ಜನವಾಡ ರಸ್ತೆಯಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ನಡೆದ ಯುವ ಸಂಘಗಳ ಅಭಿವೃದ್ಧಿ ಶಿಬಿರದ ಸಮಾರೋಪ ಹಾಗೂ ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಏನೇ ಕ್ರಾಂತಿಕಾರಿ ಬದಲಾವಣೆಯಾದರೂ ಅದರಲ್ಲಿ ಯುವಕರ ಪಾತ್ರವೇ ಪ್ರಧಾನವಾಗಿರುತ್ತದೆ ಎಂದು ನುಡಿದರು.
ಯುವಕರು ಸಂಘಗಳನ್ನು ಕಟ್ಟಿಕೊಂಡು ಗ್ರಾಮಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಪರಿಸರ ಜಾಗೃತಿಯಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ಗ್ರಾಮ, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೋರಮೆ ಮಾತನಾಡಿ, ನೆಹರೂ ಯುವ ಕೇಂದ್ರವು ಯುವಕರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ಹಾಗೂ ಅವರನ್ನು ಸಾಧನೆಗೆ ಪ್ರೇರೇಪಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಯುವಕರು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯುವ ಸಂಘಗಳ ರಚನೆಗೆ ಉತ್ತೇಜನ ನೀಡಲಾಗುತ್ತಿದೆ. ಸಮಾನ ಮನಸ್ಕ ಯುವಕರು ಸಂಘ ರಚನೆಗೆ ನೆಹರೂ ಯುವ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಕೋವಿಡ್ ಸೋಂಕು ತಡೆಗೆ ಪ್ರತಿಯೊಬ್ಬರೂ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಅರ್ಹರು ಸ್ವಯಂ ಪ್ರೇರಣೆಯಿಂದ ಲಸಿಕೆ ಪಡೆಯಬೇಕು ಎಂದು ತಿಳಿಸಿದರು.
ರಾಷ್ಟ್ರಮಟ್ಟದ ಯುವ ಪ್ರಶಸ್ತಿ ಪುರಸ್ಕøತ ಓಂಪ್ರಕಾಶ ರೊಟ್ಟೆ, ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಪ್ರಭುಲಿಂಗ ಬಿರಾದಾರ, ರಾಜಕುಮಾರ ಪಸಾರೆ, ಮೌಲಪ್ಪ ಮಾಳಗೆ, ಮಹೇಶ ಗೋರನಾಳಕರ್, ಮಹಾತ್ಮ ಜ್ಯೋತಿಬಾ ಫುಲೆ ಯುವಕ ಸಂಘದ ಅಧ್ಯಕ್ಷ ಪವನ್ ಮಿಠಾರೆ ಇದ್ದರು.