ಜಿಲ್ಲೆ

ಯುವನಿಧಿಯಲ್ಲಿ ಯುವತಿಯರೇ ಮುಂದು, ನಿರುದ್ಯೋಗಿಗಳಿಗೆ ಉದ್ಯೋಗ ತರಬೇತಿಗೆ ನೆರವು

ಆರ್.ಕೃಷ್ಣ ಮೈಸೂರು

ರಾಜ್ಯ ಸರ್ಕಾರದ ಸ್ತ್ರೀಶಕ್ತಿ, ಗೃಹಲಕ್ಷಿ ಯೋಜನೆಯಂತೆ ಯುವ ನಿಧಿಯೂ ಮಹಿಳೆಯರಿಗೆ ಬಲ ತಂದಿದೆ. ನಿರುದ್ಯೋಗಿಗಳಿಗೆ ಉದ್ಯೋಗ ತರಬೇತಿ ನೀಡುವ ‘ಯುವ ನಿಧಿ’ಯ ಪ್ರಯೋಜನ ಪಡೆಯುವವರಲ್ಲಿ ಯುವತಿಯರೇ ಹೆಚ್ಚಾಗಿದ್ದಾರೆ.

ಯುವ ನಿಧಿಗೆ ನೋಂದಣಿಯಾದ ವಿದ್ಯಾರ್ಥಿಗಳಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಪದವಿ, ಸ್ನಾತಕೋತ್ತರ ಪದವಿಯೊಂದಿಗೆ ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಪಡೆಯಲು ಇರುವ ನಾನಾ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸುತ್ತಿರುವುದರಿಂದ ರಾಜ್ಯ ಸರ್ಕಾರ ನೀಡುತ್ತಿರುವ ಮಾಸಿಕ 1500 ರೂ. ಮತ್ತು 3 ಸಾವಿರ ರೂ. ನೆರವಾಗುತ್ತಿದೆ.

ಈ ಯೋಜನೆಯ ಲಾಭ ಪಡೆಯುವಲ್ಲಿ ಯುವತಿಯರ ಪಾರಮ್ಯವೇ ಮುಂದುವರಿದಿದೆ. ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 6948 ಯುವಜನರು ನೋಂದಣಿ ಮಾಡಿಸಿಕೊಂಡಿದ್ದು, 3,717ಯುವತಿಯರು, 3,231 ಯುವಕರು ನೋಂದಣಿಯಾಗಿದ್ದಾರೆ.

2023ರಲ್ಲಿ ಪದವಿ, ಡಿಪ್ಲೊಮಾ ಉತ್ತೀರ್ಣರಾಗಿ 180 ದಿನಗಳಾದರೂ ಉದ್ಯೋಗ ಸಿಗದೆ ನಿರುದ್ಯೋಗಿಯಾಗಿರುವವರು ಈ ಯೋಜನೆಗೆ ಅರ್ಹರು. ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಯೋಜನೆಯ ಹಣವನ್ನು ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಲಾನುಭವಿಗಳು ಪ್ರತಿ ತಿಂಗಳು 25ರಂದು ಸ್ವಯಂ ಘೋಷಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಯುವ ನಿಧಿ ಯೋಜನೆಯಿಂದ 3 ಸಾವಿರ ರೂ. ಹಣ ಬರುತ್ತಿದ್ದು, ನಿತ್ಯ ಮೈಸೂರಿನ ಲೈಬ್ರರಿಗಳಿಗೆ ಬಂದು ವ್ಯಾಸಂಗ ಮಾಡುವುದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆದಿದೆ. ಅಗತ್ಯ ಪುಸ್ತಕ ಖರೀದಿಗೆ ಅನುಕೂಲವಾಗಿದೆ. ಕೆ-ಸೆಟ್ ಮತ್ತು ಟಿಇಟಿ ಪರೀಕ್ಷೆ ಪಾಸ್ ಮಾಡಿಕೊಂಡಿದ್ದೇನೆ. ಜತೆಗೆ ಜೀವನ ನಿರ್ವಹಣೆಗೂ ಅನುಕೂಲವಾಗಿದೆ ಎನ್ನುತ್ತಾರೆ ಫಲಾನುವಿಗಳು.

ಹಿಂದೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ತರಬೇತಿಗಾಗಿ ಆಕಾಂಕ್ಷಿಗಳು ಸಾಕಷ್ಟು ವೆಚ್ಚ ಮಾಡಬೇಕಾಗಿತ್ತು. ಇದರಿಂದ ಆರ್ಥಿಕವಾಗಿ ಹಿಂದುಳಿದ ಎಷ್ಟೋ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ, ಆರ್ಥಿಕವಾಗಿ ಪುಸ್ತಕ, ಇನ್ನಿತರ ಸಾಮಗ್ರಿ ಕೊಳ್ಳಲು ಸಾಧ್ಯವಾಗದೆ ಅವಕಾಶ ವಂಚಿತರಾಗಬೇಕಾಗಿತ್ತು.

ಆದರೆ ರಾಜ್ಯ ಸರ್ಕಾರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಯುವ ನಿಧಿ ಜಾರಿಗೊಳಿಸಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಇನ್ನಿತರ ಕೌಶಲಾಭಿವೃದ್ಧಿ ತರಬೇತಿ ಪಡೆಯಲು ನೆರವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಯುವ ನಿಧಿಯಿಂದ ಅನುಕೂಲವಾಗಿದ್ದು, ಹೆಣ್ಣು ಮಕ್ಕಳು ಹೆಚ್ಚಿನ ಅನುಕೂಲ ಪಡೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಜನಾಂಗದವರೂ ಇದರಲ್ಲಿ ಸೇರಿದ್ದಾರೆ. ಯುವ ನಿಧಿ ಯೋಜನೆ ಕುರಿತು ಜಾಗೃತಿ, ಪ್ರಚಾರ ಸಹ ಮಾಡಲಾಗುತ್ತಿದೆ. ಹೀಗಾಗಿ ತಿಂಗಳಿಂದ ತಿಂಗಳಿಗೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಗ್ರಾಮೀಣ ಪ್ರದೇಶಕ್ಕೂ ಅನುಕೂಲ:

ಯುವ ನಿಧಿಯಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ನೆರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ನಗರ ಪ್ರದೇಶದವರಿಗೆ ಸೀಮಿತ ಎನ್ನುವ ಭಾವನೆಯಿಂದ ಹೊರ ಬರಲು ಈ ಯೋಜನೆ ಅನುಕೂಲವಾಗಿದ್ದು, ಜಿಲ್ಲೆಯ ಗ್ರಾಮೀಣ ಭಾಗದಿಂದ ಹೆಚ್ಚಿನ ವಿದ್ಯಾರ್ಥಿಗಳು ಇದರ ಅನುಕೂಲ ಪಡೆಯುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆಯಲು ನೆರವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಅಂಕಿ ಅಂಶ

ಒಟ್ಟು ಫಲಾನುಭವಿಗಳು 6948

ಮಹಿಳೆಯರು 3717

ಪುರುಷರು 3231

ತಾಲೂಕುವಾರು ವಿವರ

ಮೈಸೂರು 2907

ಎಚ್.ಡಿ.ಕೋಟೆ 489

ಹುಣಸೂರು 658

ಕೆ.ಆರ್.ನಗರ 533

ನಂಜನಗೂಡು 767

ಪಿರಿಯಾಪಟ್ಟಣ 587

ಸಾಲಿಗ್ರಾಮ 150

ತಿ.ನರಸೀಪುರ 738

ಸರಗೂರು 119

ಒಟ್ಟು 6948

ಜಾತಿವಾರು ವಿವರ

ಪರಿಶಿಷ್ಟ ಜಾತಿ 1499

ಪರಿಶಿಷ್ಟ ಪಂಗಡ 713

ಒಬಿಸಿ 4264

ಶೈಕ್ಷಣಿಕವಾರು ಪಟ್ಟಿ

ಪದವಿ 6819

ಡಿಪ್ಲೊಮಾ 129

ಸರ್ಕಾರದ ಯುವನಿಧಿ ಯೋಜನೆಯಿಂದ ಗ್ರಾಮೀಣ ಭಾಗದ ಅದರಲ್ಲೂ ಹೆಣ್ಣು ಮಕ್ಕಳಿಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ನೆರವಾಗಿದೆ. ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಿಂದಲೂ ನೋಂದಣಿಯಾಗಿದ್ದು, ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಾಗಿ ನೋಂದಣಿ ಮಾಡಿಸಿಕೊಂಡು ತರಬೇತಿ ಪಡೆಯುವ ಮೂಲಕ ಯೋಜನೆ ಲಾಭ ಪಡೆಯುತ್ತಿದ್ದಾರೆ.

ಡಿ.ಎಂ.ರಾಣಿ

ಸಹಾಯಕ ನಿರ್ದೇಶಕಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ