ಜಿಲ್ಲೆ

ಯುವನಿಧಿಗೆ 5 ವರ್ಷ ಹಿಂದಿನವರನ್ನೂ ಪರಿಗಣಿಸಿ  -ಸರ್ಕಾರಕ್ಕೆ ಎಐವೈಎಫ್ ಮನವಿ

ದಾವಣಗೆರೆ: ಕನಿಷ್ಠ 5 ವರ್ಷಗಳ ಹಿಂದಿನ ನಿರುದ್ಯೋಗಿಗೂ ಯುವನಿಧಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ ಶನಿವಾರ ದಾವಣಗೆರೆ ಉಪವಿಭಾಗಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿತು.

ಮೂರು-ನಾಲ್ಕು ವರ್ಷಗಳ ಹಿಂದೆ ಕೋವಿಡ್ ಪರಿಣಾಮದಿಂದ ಶಿಕ್ಷಣ ಹಾಗೂ ಉದ್ಯೋಗದಲ್ಲಿ ತೊಂದರೆಗೊಳಾದವರು ಅನೇಕರಿದ್ದಾರೆ. ಅವರ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕೆಂದು ಆಗ್ರಹಿಸಿ ಎಸಿ ದುರ್ಗಾಶ್ರೀ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಮಾತನಾಡಿ, ರಾಜ್ಯ ಸರ್ಕಾರ ಯುವನಿಧಿ ಯೋಜನೆ ಜಾರಿ ಮಾಡುತ್ತಿರುವುದು ಸ್ವಾಗತಾರ್ಹ. ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಪೂರ್ಣಗೊಳಿಸಿದವರನ್ನು ಮಾತ್ರ ಪರಿಗಣಿಸುವುದು ಸರಿಯಲ್ಲ ಎಂದರು.

ಸರ್ಕಾರ ಕೇವಲ ಪ್ರಚಾರ ದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸದೆ ವೈಜ್ಞಾನಿಕ ಕ್ರಮ ಅನುಸರಿಸಿ ಕನಿಷ್ಠ 5 ವರ್ಷಗಳ ಹಿಂದಿನ ಅವಧಿಯಲ್ಲಿ ಶಿಕ್ಷಣ ಪೂರ್ಣಗೊಳಿಸಿದವರಿಗೂ ಇದನ್ನು ವಿಸ್ತರಿಸಿದರೆ ಅನುಕೂಲವಾಗಲಿದೆ ಎಂದರು.

ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ನೇಮಕಾತಿಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ವಿಧಿಸುವ ಶುಲ್ಕದ ಹೊರೆ ಇಳಿಸಬೇಕು. ಯುವಜನರ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಯುವನೀತಿ ಪರಿಷ್ಕರಿಸಿ ಜಾರಿಗೆ ತರಬೇಕು.

ಬಿಜೆಪಿ ಸರ್ಕಾರ ತರಾತುರಿಯಲ್ಲಿ ಅನುಷ್ಠಾನಗೊಳಿಸಿದ ಅವೈಜ್ಞಾನಿಕ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ರದ್ದುಪಡಿಸುವ ಮೂಲಕ ರಾಜ್ಯದ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ತಿಪ್ಪೇಶಿ, ಕೆ. ಶೇಖರ, ಕೆ. ಮಲ್ಲಿಕಾರ್ಜುನ, ಹನುಮಂತಪ್ಪ ನಿಟ್ಟುವಳ್ಳಿ, ಎ.ಕೆ.ಅರುಣಾ ನಿಟ್ಟುವಳ್ಳಿ, ಸಿ. ಗುರುಮೂರ್ತಿ, ಹನುಮಂತಪ್ಪ ಇತರರಿದ್ದರು.

--