ಜಿಲ್ಲೆ

ಯುವಜನೋತ್ಸವ ಲಾಂಚನ ಅನಾವರಣ

ಹುಬ್ಬಳ್ಳಿ: ಯಾವುದೇ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕಾದರೆ ಯುವ ಮನಸ್ಸು ಮತ್ತು ಹೃದಯಗಳ ಅಗತ್ಯವಿದೆ. ದೇಶದಲ್ಲಿ ಯುವಕರಿಂದಲೇ ಬದಲಾವಣೆಯಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಧಾರವಾಡದಲ್ಲಿ ಆಯೋಜಿಸಿರುವ 26ನೇ ರಾಷ್ಟ್ರೀಯ ಯುವಜನೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ ಅವರು ದೆಹಲಿಯಲ್ಲಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಶನಿವಾರದಂದು ವರ್ಚುವಲ್ ಮೂಲಕ ಲಾಂಚನ ಹಾಗೂ ಮ್ಯಾಸ್ಕಾಟ್ ಅನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿಯಲ್ಲಿ ಲಾಂಚನ ಮತ್ತು ಮ್ಯಾಸ್ಕಾಟ್ ಅನಾವರಣಗೊಳಿಸಿ ಮಾತನಾಡಿದರು.

ಯುವಜನೋತ್ಸವ ಕಾರ್ಯಕ್ರಮ ಭಾವನೆಗಳನ್ನು ಅರಳಿಸುವ ಕೆಲಸ ಮಾಡುತ್ತಿದೆ. ಹೊಸತನ್ನು ಮಾಡಬೇಕೆನ್ನುವವರು, ಹೊಸದನ್ನು ಚಿಂತಿಸುವವರು, ಯೋಜಿಸುವರು, ಬದಲಾವಣೆಗಳನ್ನು ಒಪ್ಪಿಕೊಳ್ಳುವವರು ಸದಾ ಯುವಕರಾಗಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು 73ನೇ ವಯಸ್ಸಿನಲ್ಲೂ ಹೊಸ ವಿಚಾರ, ಚಿಂತನೆಗಳನ್ನು ಮಾಡುತ್ತ ಮಾನಸಿಕವಾಗಿ ಇನ್ನೂ ಯುವಕರಾಗಿದ್ದಾರೆ ಎಂದು ತಿಳಿಸಿದರು.

ಭಾರತ ಬದಲಾಗುತ್ತಿದೆ. ಇಡೀ ಜಗತ್ತು ಭಾರತದ ಆಲೋಚನೆಗಳನ್ನು ಸ್ವೀಕಾರ ಮಾಡುತ್ತಿದೆ. ಭಾರತದ ಯೋಗವನ್ನು ಒಪ್ಪಿಕೊಂಡಿದೆ. ಜಗತ್ತು ಭಾರತದ ಕಡೆಗೆ ನೋಡುತ್ತಿದೆ. 21ನೇ ಶತಮಾನ ಭಾರತದ್ದಾಗಬೇಕು. ಭಾರತವು ಇಡೀ ಜಗತ್ತಿನಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ 5ನೇ ಸ್ಥಾನದಲ್ಲಿದೆ. 2027-28ರಲ್ಲಿ 3ನೇ ಸ್ಥಾನಕ್ಕೆ ಏರಲಿದ್ದು, ಇನ್ನೂ 15 ವರ್ಷಗಳ ನಂತರ ಮೊದಲ ಸ್ಥಾನ ತಲುಪಲಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಹಾಗೂ ಇತರರು ಇದ್ದರು.