ಜಿಲ್ಲೆ

ಯುವಜನರಲ್ಲಿ ಹೃದಯಾಘಾತ ಹೆಚ್ಚಳ ಆತಂಕಕಾರಿ ಬೆಳವಣಿಗೆ

ಬೇಲೂರು: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಇಂಡಿಯಾನ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ ವೈದ್ಯ ಡಾ.ಅನೂಪ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ವೈಷ್ಣವ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ 25 ರಿಂದ 40 ವರ್ಷದ ವಯಸ್ಸಿನವರೇ ಹೆಚ್ಚಾಗಿ ಹೃದಯಾಘಾತದಲ್ಲಿ ಮೃತಪಡುತ್ತಿದ್ದಾರೆ. ಯುವ ಸಮುದಾಯ ಹೆಚ್ಚಾಗಿ ದುಶ್ಚಟಗಳಿಗೆ ದಾಸರಾಗಿರುವುದು ಒಂದು ಕಾರಣವಾದರೆ, ಇನ್ನು ಮಾನಸಿಕವಾಗಿ ಜೀವಿಸುತ್ತಿರುವುದು ಇನ್ನೊಂದು ಕಾರಣ ಎಂದರು.

ವಿದ್ಯಾರ್ಥಿಗಳಿಗೆ ಪಾಲಕರು ಯಾವುದೇ ರೀತಿಯಲ್ಲಿ ಒತ್ತಡ ಹೇರದೆ ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಲು ಸೂಚಿಸಬೇಕು. ಜಂಕ್ ಫುಡ್‌ಗಳಿಂದ ದೂರವಿದ್ದು, ದುಶ್ಚಟ ಕಡಿಮೆ ಮಾಡಬೇಕು. ಯುವಕರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ವ್ಯಾಯಾಮ, ಆಟೋಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಇಂತಹ ಕಾಯಿಲೆಗಳಿಂದ ದೂರವಿರಬಹುದು. ಪ್ರತಿನಿತ್ಯ 8 ಗಂಟೆ ಕಾಲ ನಿದ್ದೆಗೆ ಅವಕಾಶ ನೀಡಿದರೆ ಯಾವುದೇ ರೋಗ ಬರುವುದಿಲ್ಲ. ಕರೊನಾ ಸಂದರ್ಭ ನೀಡಿದ ವ್ಯಾಕ್ಸಿನ್‌ನಿಂದಾಗಿ ಹೆಚ್ಚಾಗಿ ಹೃದಯ ಸ್ಥಂಭನವಾಗುತ್ತದೆ ಎಂಬುದು ತಪ್ಪು ಕಲ್ಪನೆ ಎಂದರು.

ಹಾಸನ ಹಿಮ್ಸ್ ಆಸ್ಪತ್ರೆಯ ಮುಖ್ಯಸ್ಥ ಡಾ.ರವಿ ಮಾತನಾಡಿ, ಇಂದಿನ ಯುವ ಜನಾಂಗದಲ್ಲಿ ಬದಲಾದ ಜೀವನಶೈಲಿ ಹಾಗೂ ಸಂಸ್ಕರಿಸದ ಆಹಾರ ಬಳಕೆಯಿಂದ ಇಂತಹ ಹೃದಯಾಘಾತ ಸಂಭವಿಸುತ್ತಿದೆ. ನಿದ್ರಾಹೀನತೆ, ಅತಿಯಾದ ಮೊಬೈಲ್ ಬಳಕೆ, ದೀರ್ಘವಾದ ಮಾನಸಿಕ ಒತ್ತಡ ಅನುಭವಿಸಿದಾಗ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹಿಮ್ಸ್ ಸಂಶೋಧನೆ ಪ್ರಕಾರ ಹದಿಹರೆಯದ ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳಕ್ಕೆ ಅತಿಯಾದ ಮೊಬೈಲ್ ಬಳಕೆ ಕಾರಣ ಎಂದು ತಿಳಿದು ಬಂದಿದೆ. ಆದ್ದರಿಂದ ಉತ್ತಮ ಆರೋಗ್ಯ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇಂತಹ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದರು.

ಸಮಾಜ ಸೇವಕ ಬಿ.ಎಂ.ಸಂತೋಷ್ ಮಾತನಾಡಿ, ರೋಗಿಗಳ ಸೇವೆಯಲ್ಲಿ ವೈದ್ಯರ ಪಾತ್ರ ದೊಡ್ಡದಾಗಿದೆ. ಭೂಮಿ ತಾಯಿ ನಮ್ಮನ್ನು ಹೊತ್ತು ಸಲಹುತ್ತಾಳೆ, ಭೂಮಿ ಮೇಲಿರುವ ನಮ್ಮನ್ನು ಪ್ರತಿನಿತ್ಯ ಸಲಹುವ ವೈದ್ಯರನ್ನು ನೆನೆಯುವ ಕೆಲಸ ಆಗಬೇಕು. ತಾಲೂಕಿನಲ್ಲಿ 5 ಜನರು ಹೃದಯಾಘಾತಕ್ಕೆ ಬಲಿಯಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಸ್ಪಂದನ ಸಿರಿವೇದಿಕೆ ಜಿಲ್ಲಾಧ್ಯಕ್ಷೆ ಆಶಾಕಿರಣ್, ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತ್‌ಕುಮಾರ್, ಆರೋಗ್ಯಾಧಿಕಾರಿ ಡಾ.ವಿಜಯ್, ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್, ಕೆಡಿಪಿ ಸದಸ್ಯೆ ಸೌಮ್ಯಾ, ಡಾ.ಶ್ರೀಧರ್, ಡಾ.ರಾಘವೇಂದ್ರ, ಡಾ.ನಾರಾಯಣಸ್ವಾಮಿ, ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವೀಂದ್ರನಾಥ್, ಡಾ.ನರಸೇಗೌಡ, ಡಾ.ಚಂದ್ರಮೌಳಿ, ಡಾ.ಸತೀಶ್, ಡಾ.ರಘುಕಿರಣ್, ಡಾ.ಸುಧಾ, ಡಾ.ಮಮತಾ, ಡಾ.ಅಶ್ವತ್ ಇತರರಿದ್ದರು.