ಬೀಳಗಿಯ ಮಿನಿ ವಿಧಾನಸೌಧ ಆವರಣದಲ್ಲಿ ಮತದಾನ ಜಾಗೃತಿ. 
ಜಿಲ್ಲೆ

ಯುವಜನ ಕಡ್ಡಾಯವಾಗಿ ಹೆಸರು ನೋಂದಾಯಿಸಿ

ಬಾಗಲಕೋಟೆ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಸಿಕೊಳ್ಳುವ ಮೂಲಕ ಯುವಕರು ಮತದಾನದ ಹಕ್ಕನ್ನು ಪಡೆಯಬೇಕು ಎಂದು ಜಿಲ್ಲಾ ಸೀಪ್ ನೋಡಲ್ ಅಧಿಕಾರಿ ಸಿ.ಆರ್. ಮುಂಡರಗಿ ಹೇಳಿದರು.
ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಶನಿವಾರ ತಾಲೂಕ ಪಂಚಾಯಿತಿ ತಹಸೀಲ್ದಾರ ಕಚೇರಿಯವರೆಗೆ ಕಾಲ್ನಾಡಿಗೆ ಜಾಥಾ ಮೂಲಕ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿರುವವರಿಗೆ ಹಾಗೂ ಸುತ್ತ-ಮುತ್ತಲಿನವರಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮಾಡಬೇಕು. ಈಗಾಗಲೇ ಬಿಡುಗಡೆಯಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿ, ಹೆಸರು ಇಲ್ಲದೇ ಇದ್ದಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಬೀಳಗಿ ತಹಸೀಲ್ದಾರ ಸುಹಾಸ ಇಂಗಳೆ ಮಾತನಾಡಿ, ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳಲು ಸರ್ಕಾರದಿಂದ ಓಟರ್ ಹೆಲ್ಪ ಆ್ಯಪ್ ಬಿಡುಗಡೆಗೊಳಿಸಲಾಗಿದ್ದು, ಈ ಅಪ್ಲಿಕೇಶನ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ ಎಂದರು.
ಜಿ.ಪಂ ಯೋಜನಾಧಿಕಾರಿ ಭೀಮಪ್ಪ ತಳವಾರ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಽಕಾರಿ ಸಿದ್ದು ನೆಕ್ಕರಗುಂದಿ, ಸಹಾಯಕ ನಿರ್ದೇಶಕ ಮಹೇಶ ಜಗಲಿ, ಮಾಸ್ಟರ್ ಟ್ರೇನರ್ ಲೂಟಿ, ವಿವಿಧ ಕಾಲೇಜುಗಳ ಪ್ರಾಂಶುಪಾರಲು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಬಿಎಲ್‌ಓಗಳು ಪಾಲ್ಗೊಂಡಿದ್ದರು.