ಖಾನಾಪುರದಲ್ಲಿ ಕ್ಷತ್ರಿಯ ಮರಾಠ ಪರಿಷತ್ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಂಜುನಾಥ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಡಾ.ಸೋನಾಲಿ ಸರ್ನೋಬತ್, ಸುರೇಶರಾವ ಸಾಠೆ, ದಿಲೀಪ ಪವಾರ, ವೆಂಕಟ ಚವ್ಹಾಣ, ಸುನೀಲ್ ಚವ್ಹಾಣ ಇತರರಿದ್ದರು. 
ಜಿಲ್ಲೆ

ಯುವಕರೇ ತಾಂತ್ರಿಕ ಶಿಕ್ಷಣದತ್ತ ಗಮನ ಹರಿಸಿ

ಖಾನಾಪುರ: ಛತ್ರಪತಿ ಶಿವಾಜಿ ಮಹಾರಾಜರ ಇಡೀ ಜೀವನ ಪಯಣ ಹೋರಾಟಗಳಿಂದ ಕೂಡಿದ್ದರೂ ನ್ಯಾಯ, ಸದ್ಗುಣ, ಜನ ಪ್ರೇಮ, ದೇಶಪ್ರೇಮದ ಚಿಂತನೆಗಳು ಅವರಲ್ಲಿದ್ದವು. ಜಗತ್ತಿಗೆ ಆದರ್ಶ ತೋರುವ ಮಹಾಪುರುಷ ನಮ್ಮ ಸಮಾಜದ ಶಕ್ತಿಯ ಮೂಲ. ಇದನ್ನು ಎಂದಿಗೂ ಮರೆಯದೆ ಮರಾಠ ಸಮುದಾಯದ ಯುವಕರು ಬುದ್ಧಿವಂತಿಕೆಯಿಂದ ಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿಯೂ ಮಿಂಚಬೇಕು ಎಂದು ಮರಾಠ ಸಮಾಜದ ಗುರು ಬೆಂಗಳೂರಿನ ಗೋಸಾವಿ ಮಠದ ಮಠಾಧೀಶ ಮಂಜುನಾಥ ಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣ ಸಮೀಪದ ಪಾಟೀಲ ಗಾರ್ಡನ್‌ನಲ್ಲಿ ಕ್ಷತ್ರಿಯ ಮರಾಠ ಪರಿಷತ್ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಜ್ಞಾನ ಅವಶ್ಯಕ. ಆದರೆ, ಜ್ಞಾನ ಮಾತ್ರ ಕೆಲಸ ಮಾಡುವುದಿಲ್ಲ. ನಿಮ್ಮ ಜ್ಞಾನ ಮತ್ತು ಪಾಂಡಿತ್ಯವೂ ನಡವಳಿಕೆ ಮತ್ತು ಸಂಸ್ಕಾರಗಳ ಸಂಯೋಜನೆಯಾಗಿರಬೇಕು. ಜ್ಞಾನವನ್ನು ಆಧ್ಯಾತ್ಮಿಕತೆ ಮತ್ತು ಪ್ರಾಯೋಗಿಕತೆಯೊಂದಿಗೆ ಸಂಯೋಜಿಸಿದಾಗ ಮಾತ್ರ ವ್ಯಕ್ತಿಯು ಸಾರ್ವಜನಿಕ ಗೌರವಕ್ಕೆ ಅರ್ಹನಾಗುತ್ತಾನೆ. ಭವ್ಯ ಇತಿಹಾಸವಿರುವ ಸಮಾಜದಲ್ಲಿ ಜನ್ಮ ಸಾರ್ಥಕವಾಗಲು ಶಿವತಂತ್ರ, ಶಿವನೀತಿ, ಶಿವಚರಿತ್ರೆ ಮತ್ತು ಶಿವವಿಚಾರಗಳನ್ನು ಅಳವಡಿಸಿಕೊಳ್ಳಿ ಎಂದರು.

ಮರಾಠ ಪರಿಷತ್ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮಾತನಾಡಿ, ಗುರುವಿನ ಸ್ಥಾನಮಾನ ಹೊಂದಿರುವ ಸಮಾಜ ಎಂದಿಗೂ ದಾರಿ ತಪ್ಪುವುದಿಲ್ಲ. ಗುರುವಂದನಾ ಕಾರ್ಯಕ್ರಮ ಸಮಾಜಕ್ಕಾಗಿ ದುಡಿಯುವ ದಿಕ್ಕು, ಶಕ್ತಿ ನೀಡಿದೆ. ಮರಾಠರ ಮಕ್ಕಳು ಕೃಷಿ ಮಾಡಲು, ಕಷ್ಟಪಟ್ಟು ದುಡಿಯಲು, ಸೈನ್ಯದಲ್ಲಿ ಮತ್ತು ಜೈಲಿಗೆ ಹೋಗಲೂ ಬೇಕು. ಆದರೆ, ಉದ್ಯೋಗ ಮತ್ತು ಶಿಕ್ಷಣ ನೀಡುವಾಗ ಮರಾಠರನ್ನು ಪರಿಗಣಿಸುವುದಿಲ್ಲ. ಸಾಮಾಜಿಕ ಸಂಘಟನೆಯಿಂದ ಸಾಮಾಜಿಕ ಪ್ರಗತಿ ಸಾಧ್ಯವಿದ್ದು, ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಪರಿವರ್ತನೆಗೆ ಮರಾಠರು ಸಿದ್ಧರಾಗಬೇಕು ಎಂದು ಮನವಿ ಮಾಡಿದರು.

ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಸುರೇಶರಾವ ಸಾಠೆ ಮಾತನಾಡಿ, ಸಮಾಜದ ಬಾಲಕ-ಬಾಲಕಿಯರಿಗೆ ಪರಿಷತ್ ವತಿಯಿಂದ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅದರ ಲಾಭ ಪಡೆಯುವಲ್ಲಿ ಬೆಳಗಾವಿ ಜಿಲ್ಲೆಯ ಸಮುದಾಯ ಹಿಂದುಳಿದಿದೆ. ಸಮುದಾಯವು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ ಹೊಂದಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಶ್ರೀರಾಮ ಸೇನೆ ಹಿಂದುಸ್ತಾನದ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ, ಪರಿಷತ್ ಜಿಲ್ಲಾ ಉಪಾಧ್ಯಕ್ಷ ದಿಲೀಪ ಪವಾರ ಮಾತನಾಡಿದರು.

ನೂಲಿನ ರಾಮನಾಥಗಿರಿ ಮಹಾರಾಜರು, ಹಂಡಿಭಡಂಗನಾಥ ಮಠಾಧೀಶ ಪೀರಶೆರನಾಥ ಮೋಹನನಾಥ ಮಹಾರಾಜ, ಕ್ಷತ್ರಿಯ ಮರಾಠ ಪರಿಷತ್ ರಾಜ್ಯ ಉಪಾಧ್ಯಕ್ಷ ಸುನೀಲ ಚವ್ಹಾಣ, ಖಜಾಂಚಿ ವೆಂಕಟರಾವ ಚವ್ಹಾಣ, ಬೆಂಗಳೂರು ನಗರ ಉಪಾಧ್ಯಕ್ಷ ರೋಹಿತ ಸಾಠೆ, ಬಸವರಾಜ ಮೇಗೋಟೆ, ಶಂಕರ ಬಾಬಲಿ, ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ, ವಿಲಾಸ ಬೆಳಗಾವಕರ, ಬಬನ ದಳವಿ, ಪೀಟರ ಡಿಸೋಜ, ಶಿವಸೇನೆ ರಾಜ್ಯ ಉಪಾಧ್ಯಕ್ಷ ಕೆ.ಪಿ.ಪಾಟೀಲ, ರಮೇಶ ಪಾಟೀಲ, ನಾರಾಯಣ ಓಗ್ಲೆ, ಸೀತಾರಾಮ ಬೇದ್ರೆ, ನಿರಂಜನ ಬಿರ್ಜೆ, ಡಾ.ಸಮೀರ ಸರ್ನೋಬತ, ಸುನೀಲ ಚಿಗುಳಕರ ಇತರರು ಇದ್ದರು.