ಜಿಲ್ಲೆ

ಯುವಕರು ಸ್ವಾವಲಂಬಿಗಳಾಗಬೇಕು, ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಕರೆ, ಒಂದು ಜಿಲ್ಲೆ, ಒಂದು ಉತ್ಪನ್ನ ಅರಿವು ಕಾರ್ಯಾಗಾರ

ಬೆಂಗಳೂರು ಗ್ರಾಮಾಂತರ: ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 80 ಫಲಾನುಭವಿಗಳಿಗೆ ಅವಕಾಶವಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಯುವಕರು ಸ್ವಾವಲಂಬಿಗಳಾಗಬೇಕೆಂದು ಸಚಿವ ಎಂಟಿಬಿ ನಾಗರಾಜ್ ಕರೆ ನೀಡಿದರು.

ದೇವನಹಳ್ಳಿ ತಾಲೂಕು ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಕುಟುಂಬ ಆಯ್ಕೆ ಮಾಡಿ ನೆರವು ನೀಡಲೆಂದು ಈ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ 80 ಯುವಕರಿಗೆ ಜಿಲ್ಲೆಯಾದ್ಯಂತ ವಿವಿಧ ಬ್ಯಾಂಕುಗಳಿಂದ 10ಲಕ್ಷ ರೂ. ಸಾಲ ವಿತರಣೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬೆಂ.ಗ್ರಾಮಾಂತರ ಜಿಲ್ಲೆಯು ಬೆಂಗಳೂರು ನಗರ ಮಾರುಕಟ್ಟೆಗೆ ಹತ್ತಿರವಿರುವುದರಿಂದ ಕೋಳಿ ಉತ್ಪನ್ನಗಳ ಸಂಸ್ಕರಣೆ, ಸಾಗಣೆ ಮೂಲಕ ಲಾಭಾಂಶ ಪಡೆಯಲು ಯುವಜನತೆಗೆ ಹೆಚ್ಚು ಔದ್ಯೋಗಿಕ ಅವಕಾಶವಿರುವುದರಿಂದ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.

ಮೆಟ್ರಿಕ್ ವಿದ್ಯಾರ್ಹತೆ ಹೊಂದಿರುವ ಯುವಕರು ಈ ಯೋಜನೆಯ ಸೌಲಭ್ಯ ಪಡೆದು ಉದ್ಯಮಿಗಳಾಗಿ ಹೊರಹೊಮ್ಮಲು ಇದೊಂದು ಸುವರ್ಣಾವಕಾಶ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ ಮಾತನಾಡಿ, ಪಶುಪಾಲನೆ, ಕೃಷಿ, ತೋಟಗಾರಿಕೆ ಇಲಾಖೆಗಳು ಬ್ಯಾಂಕಿನೊಂದಿಗೆ ಸಮನ್ವಯ ಸಾಧಿಸಿ, ಯುವಜನರು ಈ ಯೋಜನೆ ಸೌಲಭ್ಯ ಪಡೆಯಲು ಸೂಕ್ತ ಮಾರ್ಗದರ್ಶನ ನೀಡಲು ಅನುಕೂಲವಾಗಲಿದೆ. ಅಗತ್ಯ ಪ್ರಚಾರವನ್ನು ಕೈಗೊಂಡು ಅರ್ಹ ಫಲಾನುಭವಿಗಳಿಗೆ ಸವಲತ್ತು ದೊರೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದರು.