ಹುಲಸೂರು: ಇಂದಿನ ಯುವಕರು ಸಂವಿಧಾನದ ಬಗ್ಗೆ ಅರಿಯುವುದು ಬಹಳ ಮುಖ್ಯವಾಗಿದೆ ಎಂದು ಕಲಬುರಗಿ ಹಿರಿಯ ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ್ ಹೇಳಿದರು.
ಮುಚಳಂಬ ಗ್ರಾಮದಲ್ಲಿ ಬೇಲೂರಿನ ಶರಣ ಉರಿಲಿಂಗ ಪೆದ್ದಿ ಮಠ ಟ್ರಸ್ಟ್ ಹಾಗೂ ಶರಣ ಉರಿಲಿಂಗ ಪೆದ್ದಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯುವಕರ ನಡೆ ಸಂವಿಧಾನದ ಕಡೆ ವಿಶೇಷ ಉಪನ್ಯಾಸ ಹಾಗೂ ಚೇತನ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನದ ಅಂಗೀಕಾರದ ದಿನದಿಂದಲೇ ಭಾರತೀಯರಿಗೆ ನಿಜವಾದ ಸ್ವಾತಂತ್ರ್ಯ ದೊರಕಿದೆ, ಜಾತಿ, ಧರ್ಮದ ತಾರತಮ್ಯ ಮಾಡದೇ ಸರ್ವರೂ ಸಮಾನವಾಗಿ ಜೀವಿಸಲು ಸಂವಿಧಾನ ಹಕ್ಕು ನೀಡಿದೆ ಎಂದರು.
ಕಲಬುರಗಿ ಮಹಾವಿದ್ಯಾಲಯ ಪ್ರಾಧ್ಯಾಪಕ ಪ್ರೊ.ಶ್ರೀಮಂತ ಹೋಳ್ಕರ ಮಾತನಾಡಿ, ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಎಲ್ಲ ವರ್ಗದವರಿಗೂ ಸಮಾನವಾದ ಅವಕಾಶ ಕಲ್ಪಿಸಲಿದ್ದಾರೆ. ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಶ್ರೀ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿದರು. ಶ್ರೀ ಬಸವರಾಜ ಸ್ವಾಮೀಜಿ, ಶ್ರೀ ಚಿದಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಸೋನಿಯಾ ಪಾಟೀಲ್, ಉಪಾಧ್ಯಕ್ಷೆ ಶಾಲು ಸೋನಫುಲೆ, ಬಸವಕಲ್ಯಾಣ ನಗರಸಭೆ ಪೌರಾಯುಕ್ತ ರಾಜು ಬಣಕಾರ, ಭೀಮಣ್ಣ ಭೈರಪ್ಪನೂರ, ಸಂಜುಕುಮಾರ ಕಾಂಗೆ, ಪಿಡಿಒ ಅರ್ಜುನ ಶಿಂಧೆ, ಸಿದ್ದಾರೂಢ ಪಾಟೀಲ್, ರಾಜಕುಮಾರ ಮೋರೆ, ಚೇತನಕುಮಾರ ಇತರರಿದ್ದರು. ಶ್ರೀ ಮಾಲಿಂಗ ದೇವರು ಸ್ವಾಗತಿಸಿದರು. ನಿತ್ಯಾನಂದ ಮಂಠಾಳರ ಮತ್ತು ಭೀಮಶಾ ವಾಘಮಾರೆ ನಿರೂಪಣೆ ಮಾಡಿದರು. ಅಮ್ರಪಾಲಿ ಮಹಿಳಾ ಭಜನಾ ಸಂಘದಿಂದ ಸಂಗೀತ ಸುಧೆ ನಡೆಯಿತು.
ಚೇತನ ಸಿರಿ ಪ್ರಶಸ್ತಿ ಪ್ರದಾನ: ತಹಸೀಲ್ದಾರ್ ಶಿವಾನಂದ ಮೇತ್ರೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರಮಠ, ಸಮಾಜ ಕಲ್ಯಾಣಾಧಿಕಾರಿ ದಿಲೀಪಕುಮಾರ ಉತ್ತಮ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಅಧಿಕಾರಿ ಡಾ.ಗೌತಮ ಶಿಂಧೆ, ಪಿಎಸ್‌ಐ ಪಂಡಿತ ಎಂ., ಕ್ಷೇತ್ರ ಸಮನ್ವಯಾಧಿಕಾರಿ ಸಂಜೀವಕುಮಾರ ಕಾಂಗೆ ಅವರಿಗೆ ಚೇತನ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಸಂವಿಧಾನದ ಬಗ್ಗೆ ತಿಳಿದುಕೊಂಡು ಬೇರೆಯವರಿಗೆ ಉಪದೇಶ ಮಾಡುವಂತಹ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.
| ಶ್ರೀ ಪಂಚಾಕ್ಷರಿ ಸ್ವಾಮೀಜಿ ಪೀಠಾಧಿಪತಿ ಶರಣ ಉರಿಲಿಂಗ ಪೆದ್ದಿ ಮಠ ಬೇಲೂರು.