ಬೇಲೂರು: 18 ವರ್ಷ ಮೇಲ್ಪಟ್ಟ ಇಂದಿನ ಯುವಕರು ಅರ್ಹ ಮತದಾರರಾಗಲು ತಮ್ಮ ಹೆಸರನ್ನು ನೋಂದಣಿ ಮಾಡಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಹಸೀಲ್ದಾರ್ ರಮೇಶ್ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಾಗಿ ಮತದಾರರ ನೋಂದಣಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಯುವಕರು ಜಾಗೃತರಾಗಿ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಸಂವಿಧಾನಾತ್ಮಕವಾಗಿ ಸಿಗುವ ಮತದಾನದ ಹಕ್ಕನ್ನು ಪಡೆಯಬಹುದು. ಮುಂದಿನ ಚುನಾವಣೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಅರ್ಹ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಚುನಾವಣಾ ಆಯೋಗಕ್ಕೆ ಸಹಕಾರ ನೀಡಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸುನಿತಾ ಮಾತನಾಡಿ, ಮತದಾನ ಮಾಡುವುದು ನಮಗೆ ನಮ್ಮ ಸಂವಿಧಾನ ಕೊಟ್ಟ ಹಕ್ಕು. ಈ ಹಕ್ಕನ್ನು ಬಳಸಿಕೊಂಡು ದೇಶದ ಬೆಳವಣಿಗೆಯಲ್ಲಿ ನಮ್ಮ ಕೊಡುಗೆಯನ್ನೂ ನೀಡಬೇಕು. ಅದಕ್ಕಾಗಿ 18 ವರ್ಷ ಮೇಲ್ಪಟ್ಟವರು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದೂ ಬಿಟ್ಟು ಹೋಗಿದ್ದವರು ಪುನಃ ನೋಂದಣಿ ಮಾಡಿಸುವಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಜಾಗೃತಿ ಅಭಿಯಾನ ನಡೆಸುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪುರಸಭೆ ವ್ಯವಸ್ಥಾಪಕ ಪ್ರಶಾಂತ್, ಸಿಆರ್‌ಪಿ ಗೋಪಾಲ್, ಐಟಿಐ ಕಾಲೇಜು ಉಪನ್ಯಾಸಕ ಕುಮಾರ್, ವಿವೇಕಾನಂದ ಕಾಲೇಜು ಉಪನ್ಯಾಸಕ ಆರ್.ಎಸ್.ಮಹೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿದ್ದರು.