ಬೀದರ್‌ನಲ್ಲಿ ನಡೆದ ಶಾಂತರಸರ ಜನ್ಮ ಶತಮಾನೋತ್ಸವದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟz್ದೆÃವರು, ಡಾ.ರಾಜಕುಮಾರ ಅಲ್ಲೂರೆ, ಡಾ.ಸಂಜೀವಕುಮಾರ ಅತಿವಾಳೆ, ಪುಣ್ಯವತಿ ವಿಸಾಜಿ, ಡಾ.ಮಕ್ತುಂಬಿ ಎಂ., ಸ್ನೇಹಲತಾ ಗೌನಳ್ಳಿ, ಅನೀಲಕುಮಾರ ದೇಶಮುಖ ಇದ್ದರು. 
ಜಿಲ್ಲೆ

ಯುವಕರಿಗೆ ಶಾಂತರಸರು ಆದರ್ಶ

ಬೀದರ್: ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯದ ಮೇರು ಪರ್ವತವಾಗಿದ್ದ ಶಾಂತರಸರು ಸಮಕಾಲಿನ ಲೇಖಕರು ಹಾಗೂ ಯುವ ಸಮೂಹಕ್ಕೆ ಆದರ್ಶ ವ್ಯಕ್ತಿಯಾಗಿದ್ದರು ಎಂದು ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಹೇಳಿದರು.

ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ, ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಸಂಸ ಥಿಯೇಟರ್ ಬೆಂಗಳೂರು ಸಹಯೋಗದಡಿ ನಗರದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಶಾಂತರಸರ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಾಂತರಸರು ಬಂಡಾಯ ಮನೋಧರ್ಮ ಮೈಗೂಡಿಸಿಕೊಂಡಿದ್ದರು. ತಾನು ಜನಿಸಿದ ನೆಲದ ಸತ್ವವನ್ನು ಸಾಹಿತ್ಯದಲ್ಲಿ ಎತ್ತಿ ಹಿಡಿಯುವ ಮೂಲಕ ಬರಹಗಾರ, ಸಂಶೋಧಕ, ಹೋರಾಟಗಾರರಾಗಿ ಮಾರ್ಪಟ್ಟಿದ್ದರು ಎಂದು ಸ್ಮರಿಸಿದರು.

ಶಾಂತರಸರ ಬದುಕು-ಬರಹ ಕುರಿತು ಯುವ ಸಾಹಿತಿ ಸ್ನೇಹಲತಾ ಗೌನಳ್ಳಿ ಉಪನ್ಯಾಸ ನೀಡಿ, ಶಾಂತರಸರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ನಾಯಿ ಮತ್ತು ಪಿಂಚಣಿ, ಸ್ವಾತಂತ್ರ್ಯ ವೀರ, ಉರಿದ ಬದುಕು ಎಂಬ ಕಥಾ ಸಂಕಲನಗಳನ್ನು ರಚಿಸಿದ ಅವರು ಕರ್ನಾಟಕದ ಮಂಟೋ ಆಗಿದ್ದರು. ಉರ್ದು ಭಾಷೆಯಲ್ಲಿ ಮೂಡಿಬಂದ ಗಜಲ್ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಭಾಗವಾಗಿ ಮಾಡಿದ ಶ್ರೇಯಸ್ಸು ಶಾಂತರಸರಿಗೆ ಸಲ್ಲುತ್ತದೆ. ನ್ಯಾಯದ ವಿರುದ್ಧ ಹೋರಾಟಗೈದು ಈ ಭಾಗದ ಲೇಖಕರಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಥಾನಮಾನ ಒದಗಿಸುವಲ್ಲಿ ಶ್ರಮಿಸಿದ್ದರು ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಅಲ್ಲೂರೆ ಮಾತನಾಡಿ, ಮಾನವೀಯತೆ ಪ್ರತಿಪಾದಕರಾಗಿದ್ದ ಶಾಂತರಸರು ಪುಸ್ತಕ ಪ್ರೇಮ ಜತೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳು ಅವರಲ್ಲಿ ನಿರಂತರವಾಗಿ ಅಭಿವ್ಯಕ್ತಿ ರೂಪ ಪಡೆಯುತ್ತಿದ್ದವು ಎಂದರು.

ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಮಕ್ತುಂಬಿ ಎಂ. ಮಾತನಾಡಿ, ಬೀದರ್ ಜಿಲ್ಲೆಯೊಂದಿಗೆ ಶಾಂತರಸರ ಸಂಬAಧ ವಿಶೇಷವಾಗಿದೆ. ಇಲ್ಲಿ ನಡೆದ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವಕ್ಕೆ ಭಾಜನರಾಗಿದ್ದರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಯೊಬ್ಬರ ಜನ್ಮ ಶತಮಾನೋತ್ಸವ ರಾಜ್ಯಾದ್ಯಂತ ಆಯೋಜಿಸಿರುವುದು ಖುಷಿ ತಂದಿದೆ. ಇಂಥ ಕಾರ್ಯಕ್ರಮಗಳಿಂದ ಕನ್ನಡಿಗರೆಲ್ಲರೂ ಒಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದಂತಾಗುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಬೆಳಗು ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಅನೀಲಕುಮಾರ ದೇಶಮುಖ, ಸಾಹಿತಿಗಳಾದ ಡಾ.ರಾಮಚಂದ್ರ ಗಣಾಪುರ, ಡಾ.ಸುನೀತಾ ಕೂಡ್ಲಿಕರ್ ಇತರರಿದ್ದರು. ಅಜಿತ್ ಎನ್.ನೇಳಗೆ ಸ್ವಾಗತಿಸಿದರು. ಪ್ರೇಮ ಅವಿನಾಶ ನಿರೂಪಣೆ ಮಾಡಿದರು. ಲಕ್ಷ್ಮಣ ಮೇತ್ರೆ ವಂದಿಸಿದರು.

ನಿತ್ಯಪ್ರಿಯ ಸಂಗೀತಾ ಅಕಾಡಮಿ ಕಲಾವಿದರು ನಾಡಗೀತೆ ಹಾಡಿದರು. ಶಂಭುಲಿಂಗ ವಾಲ್ದೊಡ್ಡಿ, ನಾಗರಾಜ ಬುಳ್ಳಾ, ವೈಜಿನಾಥ ಬಾಬಶೆಟ್ಟೆ ಗಜಲ್ ಗಾಯನ ಮಾಡಿದರು. ಮಲ್ಲೇಶ್ವರಿ ಉದಯಗಿರಿ, ಡಾ.ಗೌತಮ ಬಕ್ಕಪ್ಪ, ವಿಜಯಕುಮಾರ ಗೌರೆ, ಕುಸುಮ ಹತ್ಯಾಳ, ಧನಲಕ್ಷ್ಮೀ ಪಾಟೀಲ್ ಹಲಸಿ, ಡಾ.ಶ್ರೇಯಾ ಮಹೀಂದ್ರಕರ್, ಧನರಾಜ ಅಣಕಲೆ, ವಿದ್ಯಾವತಿ ಹಿರೇಮಠ, ರವಿದಾಸ ಕಾಂಬ್ಳೆ, ಶಾಂತಮ್ಮ ಬಲ್ಲೂರ, ಸುನಿತಾ ಬಿರಾದಾರ್, ಸ್ವರೂಪರಾಣಿ ನಾಗೂರೆ, ಸರಿತಾ ಬೇಬಿ, ದಿಲೀಪಕುಮಾರ ಮೋಘ, ಸರಿತಾ ಹುಡುಗಿಕರ್, ಡಾ.ಸುನಿತಾ ಸೂರ್ಯವಂಶಿ, ಪ್ರಿಯಾಂಕ್ ಎಚ್.ಪಿ., ಅವಿನಾಶ ಸೋನೆ, ಪವನಕುಮಾರ ಬಾಲೇರ ಅವರು ಕವನ ವಾಚನ ಮಾಡಿದರು.

ಶರಣರ ಮನೋಧರ್ಮವನ್ನು ಜೀವನದ ಉಸಿರಾಗಿಸಿಕೊಂಡಿದ್ದ ಶಾಂತರಸರು ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿದ್ದು ಮಠದ ಪರಂಪರೆಯಲ್ಲಿ ಬೆಳೆದು ನಾಡಿನಾದ್ಯಂತ ಕೀರ್ತಿ ತಂದದ್ದು ಬೀದರ್ ಜಿಲ್ಲೆಯ ಹಿರಿಮೆ. ಮಠದ ಜತೆ ಅವರ ಸಂಬಂಧ ಅನೋನ್ಯವಾಗಿತ್ತು.

| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು