ಸೋಮವಾರಪೇಟೆ: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ, ಯುವಕರಿಗೆ ಉದ್ಯೋಗ ಸೃಷ್ಟಿಯುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಯುವಕರೊಂದಿಗೆ ಚರ್ಚಿಸಿದ್ದೇನೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್‌ಗೌಡ ಹೇಳಿದರು.
ಕಾಂಗ್ರೆಸ್ ವತಿಯಿಂದ ಪಟ್ಟಣದ ಜೇಸಿ ವೇದಿಕೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ನಿರುದ್ಯೋಗದಿಂದ ಪದವೀಧರ ಯುವಕರು ಆತಂಕ ಪಡುವ ಅಗತ್ಯವಿಲ್ಲ. ಸ್ವಯಂ ಉದ್ಯೋಗ ಸಿಗುವ ತನಕ ಕಾಂಗ್ರೆಸ್ ಸರ್ಕಾರ 3 ಸಾವಿರ ರೂ., ಡಿಪ್ಲೊಮಾ ಮಾಡಿದವರಿಗೆ 1500 ರೂ. ಮಾಸಾಶನ ನೀಡುವ ಯೋಜನೆಯಿದೆ. 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಗೃಹಿಣಿಗೆ ಎರಡು ಸಾವಿರ ಮಾಸಾಶನ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಲಿದೆ. ಬಿಪಿಎಲ್ ಫಲಾನುಭವಿಗಳಿಗೆ ಒಬ್ಬರಿಗೆ 10 ಕೆ.ಜಿ.ಅಕ್ಕಿ ನೀಡಲಾಗುತ್ತದೆ ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಟ.ಪಿ.ರಮೇಶ್ ಮಾತನಾಡಿ, ಎಲ್ಲ ಮಾಧ್ಯಮಗಳ ಸಮೀಕ್ಷೆಯಂತೆ ಕಾಂಗ್ರೆಸ್ 125-145 ಸ್ಥಾನಗಳನ್ನು ಪಡೆದು ಪ್ರಚಂಡ ಗೆಲವು ಸಾಧಿಸಲಿದೆ. ಬಿಜೆಪಿ 50 ಸ್ಥಾನಗಳನ್ನು ಪಡೆಯುವುದು ಕಷ್ಟವಾಗಿದೆ. ಕೊಡಗಿನಲ್ಲೂ ಎರಡು ಸ್ಥಾನಗಳನ್ನು ಪಡೆದು ಉಸ್ತುವಾರಿ ಸಚಿವ ಸ್ಥಾನವನ್ನು ಪಡೆಯಲಿದ್ದಾರೆ ಎಂದು ಹೇಳಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಬಿ.ಬಿ.ಸತೀಶ್, ಮುಖಂಡರಾದ ಕೆ.ಎಂ.ಲೋಕೇಶ್, ಮಿಥುನ್ ಹಾನಗಲ್, ಕೆ.ಪಿ.ಚಂದ್ರಕಲಾ, ಕೆ.ಎ.ಯಾಕೂಬ್, ಶಾಂತವೇರಿ ವಸಂತ್, ಹಣಕೋಡು ಸುರೇಶ್, ಎಚ್.ಎ.ನಾಗರಾಜ್, ಹರಪಳ್ಳಿ ರವೀಂದ್ರ, ಎಸ್.ಎಂ.ಚಂಗಪ್ಪ, ಈಶ್ವರ ಚಂದ್ರ ಸಾಗರ್ ಇತರರು ಇದ್ದರು. ಬಿಜೆಪಿ, ಜೆಡಿಎಸ್‌ನ ಹಲವು ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.