ಬಸವಕಲ್ಯಾಣ: ಸಮಾಜದಲ್ಲಿ ಬದಲಾವಣೆ ಜತೆಗೆ ಬೆಳಕು ತೋರುವ ಶಕ್ತಿ ಸಾಹಿತ್ಯಕ್ಕಿದ್ದು, ಪುಸ್ತಕ ಓದುವ ಸಂಸ್ಕೃತಿ ಯುವ ಸಮುದಾಯದಲ್ಲಿ ಬೆಳೆಸುವ ಅಗತ್ಯವಿದೆ ಎಂದು ಅಫಜಲಪುರದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ಶ್ರೀ ಘನಲಿಂಗ ರುದ್ರಮುನಿ ಜಾತ್ರೋತ್ಸವ, ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ೧೧ನೇ ಶತಮಾನದಿಂದ ಇದುವರೆಗೆ ಶರಣರು, ಸಂತರು, ದಾರ್ಶನಿಕರು ತಮ್ಮದೇ ಆದ ರೀತಿಯಲ್ಲಿ ಸಮಾಜ ಸುಧಾರಣೆಗೆ ಕೊಡುಗೆ ನೀಡಿದ್ದಾರೆ. ಇಂದು ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸುವಲ್ಲಿ ಮಾತೆಯ ಪಾತ್ರ ದೊಡ್ಡದಾಗಿದೆ ಎಂದರು.
ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಗವಿ ಮಠಕ್ಕೆ ಇತಿಹಾಸ ಮತ್ತು ಪರಂಪರೆ ಇದ್ದು, ಅಧ್ಯಯನ ನಡೆಯಬೇಕಿದೆ. ಈಗಿನ ಪೀಠಾಧಿಪತಿ ಅಭಿನವ ಶ್ರೀಗಳು ಭಕ್ತರ ಸಹಕಾರದಿಂದ ಮಠವನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.
ಶಿವಾನಂದ ಓಕಳಿ ರಚಿಸಿದ ಬಸವಕಲ್ಯಾಣ ಗವಿಮಠದ ಮಹಿಮೆ ಗ್ರಂಥ ಬಿಡುಗಡೆ ಮಾಡಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ಧರ್ಮದಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ ಗಟ್ಟಿಯಾಗಿ ನೆಲೆಸಲು ಸಾಧ್ಯ. ಧರ್ಮ ಉಳಿಸಿ ಬೆಳೆಸುವಲ್ಲಿ ಮಠಾಧೀಶರು, ಸ್ವಾಮೀಜಿಗಳ ಕೊಡುಗೆ ಪ್ರಮುಖವಾಗಿದೆ ಎಂದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿ, ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಪರಿಷತ್‌ನಿಂದ ಹತ್ತು ಹಲವು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಪುಸ್ತಕ ದಾಸೋಹ ಮೂಲಕ ನಾಡಿನ ಕೊಳೆಗೇರಿ ಶಾಲೆ, ಕಾರಾಗೃಹ ಮತ್ತು ಆಸಕ್ತರಿಗೆ ಉಚಿತ ಪುಸ್ತಕ ನೀಡಲಾಗುತ್ತಿದೆ. ಇದುವರೆಗೆ ಮೂರು ಲಕ್ಷ ಸಾಹಿತ್ಯ ಪುಸ್ತಕ ವಿತರಿಸಲಾಗಿದೆ ಎಂದು ತಿಳಿಸಿದರು.
ಸಾಹಿತಿ ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್ (ಶೇರಿಕಾರ್) ಮಾತನಾಡಿ, ಪುಸ್ತಕ ಓದುವ ಸಂಸ್ಕೃತಿ ಇಂದು ಕಡಿಮೆಯಾಗಿದ್ದರಿಂದ ಜನರಲ್ಲಿ ಸಾಹಿತ್ಯ ಜ್ಞಾನ ಇಲ್ಲದಂತಾಗಿದೆ. ವಚನ ಸಾಹಿತ್ಯದಂಥ ಅಪ್ರತಿಮ ಸಾಧನೆ ಮಾಡಿದ ಅಕ್ಕಮಹಾದೇವಿ ಸೇರಿ ಶರಣರು, ಸಂತರನ್ನು ಪ್ರೇರಣೆಯಾಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ನೇತೃತ್ವ ವಹಿಸಿದ್ದ ಸಂಸ್ಥಾನ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಆಶೀರ್ವಚನ ನೀಡಿದರು.
ಸರ್ವಾಧ್ಯಕ್ಷರಾದ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯ ಅಧ್ಯಕ್ಷೀಯ ಭಾಷಣ ಮಾಡಿದರು. ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸಮ್ಮುಖ ವಹಿಸಿದ್ದರು. ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ ಇತರರಿದ್ದರು.
ಗ್ರಂಥ ದಾಸೋಹಿಗಳಾದ ವಿಮಲಾಬಾಯಿ ಮಾಣಿಕಪ್ಪ ಬಿರಾದಾರ ದಂಪತಿಗೆ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು. ಪ್ರಾಚಾರ್ಯ ಸೂರ್ಯಕಾಂತ ಶೀಲವಂತ ಅಭಿನಂದನಾ ಭಾಷಣ ಮಾಡಿದರು. ರಮೇಶ ರಾಜೋಳೆ ಸ್ವಾಗತಿಸಿದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಂಗಮೇಶ ಜವಾದಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಪಲ್ಲವಿ ಪಾಟೀಲ್ ಹಾಗೂ ಪ್ರೇಮಾ ಬಿರಾದಾರ ನಿರೂಪಣೆ ಮಾಡಿದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ: ಶ್ರೀ ಘನಲಿಂಗ ರುದ್ರಮುನಿ ಜಾತ್ರೋತ್ಸವ ನಿಮಿತ್ತ ವಿವಿಧ ಕ್ಷೇತ್ರದ ಸಾಧಕರಾದ ಸಿಂಡಿಕೇಟ್ ಬ್ಯಾಕ್ ನಿವೃತ್ತ ವ್ಯವಸ್ಥಾಪಕ ಬಸವರಾಜ ಸ್ವಾಮಿ, ಪುಣ್ಯಕೋಟಿ ಪಿಯು ಕಾಲೇಜು ಅಧ್ಯಕ್ಷ ಸೂರ್ಯಕಾಂತ ಶೀಲವಂತ, ದೇವೇಂದ್ರ ಕೋರಾಳೆ ತಾಂಬೋಳ, ರೆಡ್ಡಿ ಸಮಾಜದ ಅಧ್ಯಕ್ಷ ವಿಜಯಕುಮಾರ ರೆಡ್ಡಿ ಹಾಗೂ ತ್ರಿಪುರಾಂತನ ವಿಜಯಕುಮಾರ ಮುಚಳಂಬೆ ಅವರಿಗೆ ಅಭಿನವ ಘನಲಿಂಗ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥೈಸುವ ಗುಣ ಚುಟುಕು ಸಾಹಿತ್ಯಕ್ಕಿದೆ. ಅಧ್ಯಯನಶೀಲರಾದಾಗ ಮಾತ್ರ ಮೌಲ್ಯಯುತ ಸಾಹಿತ್ಯ ರಚನೆ ಸಾಧ್ಯ. ನಾಡಿನ ಮಠಾಧೀಶ ಸಾಹಿತಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ, ಈಗಾಗಲೇ ೧೨ ರಾಜ್ಯ ಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸಿದ್ದು, ೧೩ನೇ ಸಮ್ಮೇಳನ ಇದಾಗಿದೆ. ಜೂನ್‌ನಲ್ಲಿ ಕಾಸರಗೋಡು ಅಂತಾರಾಜ್ಯ ಸಮ್ಮೇಳನ ನಡೆಸಲಾಗುತ್ತಿದೆ.
| ಕೃಷ್ಣಮೂರ್ತಿ ಕುಲಕರ್ಣಿ
ರಾಜ್ಯ ಸಂಚಾಲಕ, ಚುಟುಕು ಸಾಹಿತ್ಯ ಪರಿಷತ್
ಐದು ನಿರ್ಣಯ ಅಂಗೀಕಾರ: ಅನುಭವ ಮಂಟಪ ಅಸ್ತಿತ್ವದಲ್ಲಿ ಇರಲಿಲ್ಲ ಎಂಬ ವಿವಾದಕ್ಕೆ ತೀವ್ರ ಖಂಡನೆ ಸೇರಿ ವಿವಿಧ ಐದು ನಿರ್ಣಯಗಳನ್ನು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಅಂಗೀಕರಿಸಿತು. ವಚನ ಸಾಹಿತ್ಯದ ಸಮಗ್ರ ಅಧ್ಯಯನಕ್ಕಾಗಿ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಬಸವಕಲ್ಯಾಣ ಜಿಲ್ಲಾ ಕೇಂದ್ರವಾಗಬೇಕು. ಗವಿಮಠದ ಘನಲಿಂಗ ರುದ್ರಮುನಿ ಶಿವಾಚಾರ್ಯ ಕುರಿತ ಅಧ್ಯಯನಕ್ಕಾಗಿ ಪೀಠ ಸ್ಥಾಪಿಸಬೇಕು. ಕಸಾಪದಂತೆ ಒದಗಿಸುವಂತೆ ಚುಟುಕು ಪರಿಷತ್‌ಗೂ ಅನುದಾನ ನೀಡಬೇಕು ಎಂದು ಸಮ್ಮೇಳನ ಸರ್ಕಾರದ ಮೇಲೆ ಒತ್ತಡ ಹೇರಿತು.