ದಾವಣಗೆರೆ: ಯುವಕರೇ ದೇಶದ ಆಸ್ತಿ, ಉತ್ತಮ ಚಿಂತನೆ ಮತ್ತು ಧನಾತ್ಮಕ ವರ್ತನೆಯ ಮೂಲಕ ದೇಶದ ಬೆಳವಣಿಗೆಗೆ ಸಹಕಾರಿಯಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇತ್ತೀಚಿಗೆ ಹಮ್ಮಿಕೊಂಡಿದ್ದ ಇಂಡಕ್ಷನ್ ಪ್ರೋಗ್ರಾಂ ಉದ್ಘಾಟಿಸಿ ಮಾತನಾಡಿದರು.
ಯುವಕರು ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದೆ, ಮಧ್ಯ ಮತ್ತು ಮಾದಕ ವ್ಯಸನಿಗಳಾಗದೆ ಉತ್ತಮ ಜೀವನ ರೂಡಿಸಿಕೊಂಡು, ನಾಡಿನ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.
ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಜಿ.ಎಸ್.ಅನಿತ್ ಕುಮಾರ್ ಮಾತನಾಡಿ ಜಿಎಂಐಟಿ ಆಯ್ಕೆ ಮಾಡುವುದರ ಮೂಲಕ ತಮ್ಮ ವೃತ್ತಿ ಬೆಳವಣಿಗೆಯನ್ನು ಪ್ರಾರಂಭಿಸುತ್ತಿರುವ ವಿದ್ಯಾರ್ಥಿಗಳಿಗೆ ಒಳಿತಾಗಲಿ ಎಂದು ಹರಸಿದರು.
ಜಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ ಎಚ್. ಡಿ.ಮಹೇಶಪ್ಪ ಮಾತನಾಡಿ, ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಕಳೆದ 22 ವರ್ಷಗಳಿಂದ ಶಿಕ್ಷಣವನ್ನು ಈ ಭಾಗದ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದು, ಈ ವರ್ಷದಿಂದ ಜಿಎಂ ವಿಶ್ವವಿದ್ಯಾಲಯ ಪ್ರಾರಂಭಿಸುವುದರ ಮೂಲಕ ಮಧ್ಯ ಕರ್ನಾಟಕದ ಏಕೈಕ ಖಾಸಗಿ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ.ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್ ಓಂಕಾರಪ್ಪ ಮಾತನಾಡಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷದ ಬೋಧನಾ ಶುಲ್ಕವನ್ನು ಹಿಂತಿರುಗಿಸಲಾಗುವುದು ಮತ್ತು ಪರೀಕ್ಷೆಯಲ್ಲಿ 9.5 ಸಿಜಿಪಿಎ ಪಡೆದ ವಿದ್ಯಾರ್ಥಿಗಳಿಗೆ ಹತ್ತು ಗ್ರಾಂ ಚಿನ್ನದ ನಾಣ್ಯ ವಿತರಿಸಲಾಗುವುದು ಎಂದು ತಿಳಿಸಿದರು.
ಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಎಂ.ಬಿ. ಸಂಜಯ್ ಪಾಂಡೆ ಇದ್ದರು. ಅಕಾಡೆಮಿಕ್ ಡೀನ್ ಡಾ.ಬಿ.ಎಸ್.ಸುನಿಲ್ ಕುಮಾರ್ ಸ್ವಾಗತಿಸಿದರು.