ಜಿಲ್ಲೆ

ಯುವಕರನ್ನು ತೋಟಗಾರಿಕೆಗೆ ಪ್ರೋತ್ಸಾಹಿಸಿ

ಗದಗ: ಕೋವಿಡ್-19 ಲಾಕ್​ಡೌನ್​ನಿಂದಾಗಿ ಜಿಲ್ಲೆಯಲ್ಲಿ ಉಂಟಾಗಿರುವ ನಿರುದ್ಯೋಗ ಸಮಸ್ಯೆಯನ್ನು ತಡೆಯಬೇಕು. ಅದಕ್ಕಾಗಿ ಜಿಲ್ಲೆಯ ಯುವ ರೈತರನ್ನು ತೋಟಗಾರಿಕೆ ಬೆಳೆಗಳ ಕಡೆಗೆ ಆಕರ್ಷಿತರನ್ನಾಗಿ ಮಾಡಬೇಕು ಎಂದು ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿ ಗುರುವಾರ ಆಯೋಜಿಸಿದ್ದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2 ಸಾವಿರ ಹೊಸ ತೋಟಗಳನ್ನು ನಿರ್ವಿುಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.

ಕಳೆದ ಸಾಲಿನಲ್ಲಿ ನೆರೆಯಿಂದಾಗಿ ಜಿಲ್ಲೆಯ ರೈತರ ತೋಟಗಳು ವಿನಾಶದ ಅಂಚಿಗೆ ತಲುಪಿವೆ. ಇಲಾಖೆಯಲ್ಲಿ ಇರುವ ಯೋಜನೆಗಳನ್ನು ಬಳಸಿಕೊಂಡು ತೋಟಗಳನ್ನು ಮರುನಿರ್ವಣ ಮಾಡಬೇಕು, ತೋಟಗಾರಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ತೋಟಗಾರಿಕೆ ಪ್ರದೇಶ ವೃದ್ಧಿಸಲು ಬಳಸುವ ಬಗ್ಗೆ ಪರಿಶೀಲಿಸಿದ ಅವರು, ಜಿಲ್ಲೆಯ ಕೂಲಿ ಕಾರ್ವಿುಕರು ಬೇರೆಡೆ ವಲಸೆ ಹೋಗದಿರಲು, ವರ್ಷಪೂರ್ತಿ ಉದ್ಯೋಗ ದೊರೆಯುವಂತೆ ಕ್ರಮಕೈಗೊಳ್ಳಬೇಕು ಎಂದರು.

ತೋಟಗಾರಿಕೆ ಕ್ಷೇತ್ರವು ಅಧಿಕವಾದರೆ ರೈತರಿಗೆ ವರ್ಷಪೂರ್ತಿ ಆದಾಯದ ಮೂಲ ದೊರೆತಂತಾಗುವುದು. ಜಿಲ್ಲೆಯ ಯುವ ರೈತರಿಗೆ ತೋಟಗಾರಿಕೆಯಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ಅರಿವು ಮೂಡಿಸಬೇಕು. ತೋಟ ನಿರ್ವಣಕ್ಕೆ ಮುಂದಾಗಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಸಂವಾದ ನಡೆಯಲಿ: ಯುವ ರೈತ ಸಮುದಾಯವನ್ನು ಒಂದೆಡೆ ಸೇರಿಸಿ ಜಿಲ್ಲೆಯಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ರೈತರೊಂದಿಗೆ ಸಂವಾದ ನಡೆಸಬೇಕು. ಇದರಿಂದ ರೈತರು ಪ್ರೇರಣೆ ದೊರೆಯಲಿದೆ ಎಂದು ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಸೂಚಿಸಿದರು.

ಜಿಪಂ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಹಾಗೂ ಸಬ್ಸಿಡಿಗಳ ಕುರಿತು ರೈತರಿಗೆ ಅರಿವು ಮೂಡಿಸಿ ಸೌಲಭ್ಯ ದೊರೆಯುವಂತೆ ಮಾಡಬೇಕು. ಜಿಲ್ಲೆಯ ರೈತರು ಸಹ ತೋಟಗಾರಿಕೆಯಲ್ಲಿನ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಿದ್ಧರಿದ್ದು, ಅಧಿಕಾರಿಗಳು ಸಹಕಾರ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಸಭೆಯಲ್ಲಿ ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶೈಲೇಂದ್ರ ಬಿರಾದಾರ ಸೇರಿದಂತೆ ತಾಲೂಕುಗಳ ತೋಟಗಾರಿಕೆ ಸಹಾಯಕ ನಿರ್ದೇಶಕರು ಇದ್ದರು.

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಸಂಗ್ರಹ ಹಾಗೂ ಸಂರಕ್ಷಣೆಗಾಗಿ ಶೀಥಲಿಕರಣ ಘಟಕ (ಕೋಲ್ಡ್ ಸ್ಟೋರೆಜ್) ಅಗತ್ಯವಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. | ರಾಜೂಗೌಡ ಕೆಂಚನಗೌಡ್ರ, ಜಿಪಂ ಅಧ್ಯಕ್ಷ