ರಾಮದುರ್ಗ ಬೋವಿ ವಡ್ಡರ ಸಮುದಾಯದ ಯುವಕರ ಮೇಲಿನ ಹಲ್ಲೆ ಖಂಡಿಸಿ ಮುಖಂಡರು ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಮಾರುತಿ ತುಪ್ಪದ, ಸುಭಾಷ ಗೋಡಕೆ, ನಾಗರಾಜ ಕಟ್ಟಿಮನಿ, ಎಂ.ಪಿ.ಪಾತ್ರೋಟ, ಶಂಕರಗೌಡ ಪಾಟೀಲ, ಉಮೇಶ ಹಕಾಟಿ ಇತರರಿದ್ದರು. 
ಜಿಲ್ಲೆ

ಯುವಕರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ರಾಮದುರ್ಗ, ಬೆಳಗಾವಿ: ಬೋವಿ ವಡ್ಡರ ಸಮುದಾಯದ ಯುವಕರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ತಾಲೂಕು ಬೋವಿ ವಡ್ಡರ ಸಮುದಾಯ ಹಾಗೂ ಹಿಂದುಪರ ಸಂಘಟನೆಗಳ ಮುಖಂಡರು ಸೋಮವಾರ ಧರಣಿ ನಡೆಸಿ, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಜಿಪಂ ಮಾಜಿ ಸದಸ್ಯ ಮಾರುತಿ ತುಪ್ಪದ, ದಲಿತ ಮುಖಂಡ ಸುಭಾಷ ಗೋಡಕೆ ಹಾಗೂ ಪುರಸಭೆ ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ ಮಾತನಾಡಿ, ಕಿಡಿಗೇಡಿಗಳಿಗೆ ಆ ಸಮುದಾಯದ ಹಿರಿಯರು ಬುದ್ಧಿ ಹೇಳಬೇಕು. ಇದೇ ರೀತಿ ಅನ್ಯಕೋಮಿನವರೊಂದಿಗೆ ಗೂಂಡಾಗಿರಿ ಮಾಡಲು ಮುಂದಾದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ. ಕಳೆದ 5 ವರ್ಷಗಳಿಂದ ಭಾವೈಕ್ಯತೆಗೆ ಧಕ್ಕೆಯಾಗಿರಲಿಲ್ಲ ಎಂದರು. ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳೂ ಬೋವಿ ವಡ್ಡರ ಸಮಾಜದ ಕಾರ್ಯಕರ್ತ ಗೋಪಾಲ ಬಂಡಿವಡ್ಡರ, ರವಿ ಬಂಡಿವಡ್ಡರ, ನಂಜುಂಡಿ ಬಂಡಿವಡ್ಡರ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವುದು ಖಂಡನೀಯ. ಈಗಾಗಲೇ ಪೊಲೀಸ್ ಇಲಾಖೆಯ ಅಧಿಕಾರಿಗಳು ಕೆಲವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯದಲ್ಲಿ ಪಾಲ್ಗೊಂಡ ಹಾಗೂ ಕೃತ್ಯಕ್ಕೆ ಪ್ರೋತ್ಸಾಹ ನೀಡಿದವರನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಎಂ.ಪಿ.ಪಾತ್ರೋಟ, ಶಂಕರಗೌಡ ಪಾಟೀಲ, ಉಮೇಶ ಹಕಾಟಿ, ಎಂ.ಎಂ. ಬಂಡಿವಡ್ಡರ, ಅಶೋಕ ಬಂಡಿವಡ್ಡರ, ಶ್ರೀಕಾಂತ ಬಂಡಿವಡ್ಡರ ಇತರರಿದ್ದರು.