ಜಿಲ್ಲೆ

ಯುವಕರ ಬದುಕಿಗೆ ಭಗವದ್ಗೀತೆ ಆದರ್ಶ

ಧಾರವಾಡ: ಯುವಕರು ಬದುಕಿನ ಗುರಿ ಮುಟ್ಟಲು ಶ್ರೀಕೃಷ್ಣನ ಭಗವದ್ಗೀತೆ ಮಾರ್ಗದರ್ಶನವಾಗಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ರಂಗಾಯಣದಲ್ಲಿ ಶ್ರೀ ಆಚಾರ್ಯ ಎಜುಕೇಶನ್ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪಂ. ಭೀಮಸೇನಾಚಾರ್ಯ ಮಳಗಿ ರಚಿಸಿದ ಶ್ರೀ ಭಗವದ್ಗೀತೆ ಹಾಗೂ ಸತ್ಯಪ್ರಮೋದ ಮಳಗಿ ರಚಿಸಿದ ಶ್ರೀ ವಿಷ್ಣು ಸಹಸ್ರನಾಮ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಶ್ರೀಕೃಷ್ಣನ ಭಗವದ್ಗೀತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲುದು. ಶಿಕ್ಷಣದ ಗುರಿಗಿಂತ ಬದುಕಿನ ಗುರು ಮುಖ್ಯ. ಭಗವಾನ್ ಕೃಷ್ಣ ಗೀತೆಯಲ್ಲಿ ಹೇಳಿದ ಮಾತುಗಳು ಅರ್ಜುನನಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯಿಸುತ್ತದೆ. ವಿಹಿತವಾದ ಕರ್ಮಗಳನ್ನು ಯಜ್ಞದಂತೆ ನಿಷ್ಠೆಯಿಂದ ಮಾಡಬೇಕು. ಆಗ ಮಾತ್ರ ಎಲ್ಲರಿಗೂ ಕೃಷ್ಣನ ವಿಶ್ವರೂಪ ದರ್ಶನವಾಗುತ್ತದೆ ಎಂದರು. ಭಗವದ್ಗೀತೆ ಕುರಿತು ಪಂ. ಹೃಷಿಕೇಶಾಚಾರ್ಯ ಮಠದ, ಶ್ರೀ ವಿಷ್ಣು ಸಹಸ್ರನಾಮ ಕುರಿತು ಶ್ರೀನಿವಾಸ ಕಾಂತನವರ ಮಾತನಾಡಿದರು. ಪಂ. ಭೀಮಸೇನಾಚಾರ್ಯ ಮಳಗಿ ಅಧ್ಯಕ್ಷತೆ ವಹಿಸಿದ್ದರು. ಮನೋಜ ಹಂಚಿನಮನಿ, ಎಂ.ಎಲ್. ಜಹಗೀರದಾರ, ಪಿ.ಎಸ್. ಪುರೋಹಿತ, ಟ್ರಸ್ಟ್ ಸದಸ್ಯರು, ಇತರರು ಇದ್ದರು. ವಿಜಯೀಂದ್ರ ಅರ್ಚಕ ಸ್ವಾಗತಿಸಿದರು. ನಾಗೇಶ ಶಾನಭಾಗ ನಿರೂಪಿಸಿದರು. ವಾಸುದೇವಾಚಾರ್ಯ ಅರಕೇರಿ ವಂದಿಸಿದರು.