ಗದಗ: ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಕಟ್ಟೆಚ್ಚರ ವಹಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗುರುವಾರ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ. ವಿಶೇಷವಾಗಿ ಕಲಬುರಗಿಯಿಂದ ಅಣ್ಣಿಗೇರಿಗೆ ಬುಧವಾರ ಬಂದಿದ್ದ ಯುವಕನ ವೈದ್ಯಕೀಯ ವರದಿ ನೆಗೆಟಿವ್ ಬಂದಿದ್ದರಿಂದ ಜಿಲ್ಲಾಡಳಿತ ನಿರಾಳವಾಗಿದೆ.
ಕರೊನಾ ಪಿಡುಗು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಆದೇಶದನ್ವಯ ಜಿಲ್ಲಾದ್ಯಂತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಜಿಲ್ಲೆಯಲ್ಲಿ 81 ಜನ ನಿಗಾದಲ್ಲಿದ್ದಾರೆ. ಇದರಲ್ಲಿ ಐವರು 28 ದಿನಗಳನ್ನು ಪೂರೈಸಿ ಆರೋಗ್ಯದಿಂದ ಇದ್ದಾರೆ. ಮನೆಯಲ್ಲಿಯೇ 74 ಜನರನ್ನು ಪ್ರತ್ಯೇಕವಾಗಿ ಆರೋಗ್ಯ ತಪಾಸಣೆಯ ನಿಗಾದಲ್ಲಿ ಇರಿಸಲಾಗಿದೆ. ಒಟ್ಟು ಪರೀಕ್ಷೆಗಾಗಿ 14 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, 12 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ. ನರಗುಂದ ಮತ್ತು ಗದಗ ತಲಾ ಒಂದು ಪ್ರಕರಣಗಳ ವರದಿಗಳು ಬರಬೇಕಿದೆ. ಕರೊನಾ ವೈರಸ್ ದೃಢಪಟ್ಟ ಪ್ರಕರಣಗಳು ಜಿಲ್ಲೆಯಲ್ಲಿ ಇಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ.
ರೈತ ಬಾಂಧವರ ಗಮನಕ್ಕೆ
ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಂಬಂಧ ಗದಗ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯಲಿದ್ದ ಒಣಮೆಣಸಿನಕಾಯಿ ಟೆಂಡರ್, ಜಾನುವಾರು ಮಾರುಕಟ್ಟೆ ಮತ್ತು ಉಪ ಮಾರುಕಟ್ಟೆ ಪ್ರಾಂಗಣಗಳಾದ ಮುಳಗುಂದ ಮತ್ತು ಹುಲಕೋಟಿಗಳಲ್ಲಿ ನಡೆಯಬೇಕಿದ್ದ ಸಂತೆಗಳನ್ನು ಮಾ. 21ರಿಂದ ಮಾ. 31ರವರೆಗೆ ಸ್ಥಗಿತಗೊಳಿಸಲಾಗಿದೆ. ನಂತರದ ದಿನಗಳಲ್ಲಿ ಸರ್ಕಾರದ ನಿರ್ದೇಶನದಂತೆ ಕ್ರಮ ಜರುಗಿಸಲಾಗುವುದು. ರೈತ ಬಾಂಧವರು ಸಹಕರಿಸಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಕೋರಿದ್ದಾರೆ.
ಮನೆಯಲ್ಲೇ ಪೂಜೆ, ಪ್ರಾರ್ಥನೆ ಸಲ್ಲಿಸಿ
ಜಿಲ್ಲೆಯ ದೇವಸ್ಥಾನ, ಚರ್ಚ್, ಮಸೀದಿಗಳನ್ನು ಸಂಪೂರ್ಣ ಬಂದ್ ಮಾಡಬೇಕು. ಮನೆಯಲ್ಲಿಯೇ ಪೂಜೆ, ಪ್ರಾರ್ಥನೆ ಸಲ್ಲಿಸಬೇಕು. ಮದುವೆ, ಸಮಾರಂಭ, ಹೋಟೆಲ್, ಎಲ್ಲ ತರಹದ ಮಾಂಸ ಮಾರಾಟವನ್ನೂ ಬಂದ್ ಮಾಡಬೇಕು. ಕರೊನಾ ಸಾಂಕ್ರಾಮಿಕ ರೋಗವಾಗಿದ್ದು, ಅತೀ ಶೀಘ್ರದಲ್ಲಿ ಪಸರಿಸುವುದರಿಂದ ಸರ್ಕಾರ ಮತ್ತು ಸಾರ್ವಜನಿಕರು ಕಠಿಣ ಪರಿಸ್ಥಿತಿಗೆ ತಯಾರಾಗಬೇಕಾಗಿದೆ. ದೇಶವು ಆರೋಗ್ಯ ಭೀತಿಯಲ್ಲಿದ್ದು, ಕೇಂದ್ರ ಬಜೆಟ್ ಅಧಿವೇಶನ ಮೊಟಕುಗೊಳಿಸಬೇಕು. ವಿದೇಶದಿಂದ ಆಗಮಿಸುವ ಎಲ್ಲ ಪ್ರಯಾಣಿಕರನ್ನು ತಪಾಸಿಸಬೇಕು. ವಿದೇಶದಿಂದ ಬರುವ ಪ್ರವಾಸಿಗರನ್ನು ಜಿಲ್ಲಾಡಳಿತ ಗಮನಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಜಿ.ಡಿ. ಕಳಸಾಪೂರ ತಿಳಿಸಿದ್ದಾರೆ.
ಕರಪತ್ರ ಹಂಚಿ ಜನಜಾಗೃತಿ
ಗದಗ ಟಾಂಗಕೂಟದಲ್ಲಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಗುರುವಾರ ಟಿಶ್ಯೂ ಪೇಪರ್, ಕರೊನಾ ವೈರಸ್ ಮಾಹಿತಿವುಳ್ಳ ಕರಪತ್ರ ಹಂಚಿ ಜಾಗೃತಿ ಮೂಡಿಸಿದರು. ಕರೊನಾ ಬಗ್ಗೆ ಭಯಪಡಬೇಡಿ, ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಮಂಜುನಾಥ ಪರ್ವತಗೌಡ್ರ ಮನವಿ ಮಾಡಿದರು. ಟ್ರಾಫಿಕ್ ಪಿಎಸ್ಐ ಪಿ.ಎಸ್. ದೊಡ್ಡಮನಿ ಮಾತನಾಡಿದರು. ಎಲ್. ನಾರಾಯಣಸ್ವಾಮಿ, ದಾವಲ್ ಮುಳಗುಂದ, ಮುತ್ತಣ್ಣ ಭಜಂತ್ರಿ, ಮುತ್ತಣ್ಣ ಚೌಡಣ್ಣವರ, ಬಸವರಾಜ ಗದಗಿನ, ದತ್ತು ಬೆಳದಡಿ, ಗೌಸ್ ಇಟಗಿ, ಯೂಸೂಫ್ ರಂಗ್ರೇಜ್, ರಫೀಕ್ ಈಟಿ, ಇಮ್ತಿಯಾಜ್ ಢಾಲಾಯತ, ಶಿವಾನಂದ ಗಣಮುಖಿ, ಸುರೇಶ ಮುಳಗುಂದ, ಶಿವು ಕರಿಗೌಡ್ರ, ಅಶ್ರಫ್ ಅಣ್ಣಿಗೇರಿ, ವಿಶ್ವನಾಥ ಕಡೇಮನಿ ಉಪಸ್ಥಿತರಿದ್ದರು.
ಗದಗ ಜಿಲ್ಲೆಯಲ್ಲಿ ಕರೊನಾ ವೈರಸ್ಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ನಿಗಾಕ್ಕೆ ಒಳಗಾದ ಒಟ್ಟು 81 ಜನರಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಸೋಂಕು ಶಂಕಿತ 14 ಜನರ ಪೈಕಿ 12 ಜನರ ವರದಿ ನೆಗೆಟಿವ್ ಬಂದಿದೆ. ವಿಶೇಷವಾಗಿ ಕಲಬುರಗಿ ಯುವಕನ ರಕ್ತದ ಮಾದರಿ ನೆಗೆಟಿವ್ ಬಂದಿದ್ದು, ಇನ್ನೂ 2 ಪ್ರಕರಣಗಳ ವರದಿ ಬರಬೇಕಿದೆ.ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ ಗದಗ