ಜಿಲ್ಲೆ

ಯುವಕನ ಭೀಕರ ಹತ್ಯೆ

ರಾಜಣ್ಣ

ಹೊಳೆನರಸೀಪುರ: ತಾಲೂಕಿನ ಹಾಸನ-ಮೈಸೂರು ರಾಷ್ಟ್ರಿಯ ಹೆದ್ದಾರಿಯ ಎಸ್.ಅಂಕನಹಳ್ಳಿ ಅರಣ್ಯ ಪ್ರದೇಶದ ಸಮೀಪ ಭಾನುವಾರ ಬೆಳಗ್ಗೆ ಯುವಕನ ಭೀಕರ ಕೊಲೆಯಾಗಿದೆ.

ಮೃತನನ್ನು ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಸುದೀಪ್ ಅಲಿಯಾಸ್ ಮಣಿ ( 25) ಎಂದು ಗುರುತಿಸಲಾಗಿದೆ.

ತಾಲೂಕಿನ ಹಳ್ಳಿ ಮೈಸೂರು ಹೋಬಳಿ ಆಲಗೌಡನಹಳ್ಳಿ ಗ್ರಾಮದ ಕೆರೆಯ ಸಮೀಪದ ಹೆದ್ದಾರಿಯ ಬದಿಯಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಿ, ಹೆಣದ ಮೇಲೆ ಹಾಗೂ ಪಕ್ಕದಲ್ಲಿದ್ದ ಬೈಕ್ ಮೇಲೆ ಸೊಪ್ಪು ಮುಚ್ಚಿ ಆರೋಪಿಗಳು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ, ಸಿಪಿಐ ಹಾಗೂ ಹಳ್ಳಿ ಮೈಸೂರು ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಕಾರ್ಯ ಕೈಗೊಂಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಕೊಲೆ ಶನಿವಾರ ರಾತ್ರಿ ವೇಳೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ.